Published
3 months agoon
By
Akkare Newsಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿವೇಶನ ಪಡೆದ ಆರೋಪ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ಅಂತಿಮ ಆದೇಶ ಹೊರಬಿದ್ದಿದೆ. ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿ ವಜಾಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ. ರವಿವರ್ಮಕುಮಾರ್ ಸುದೀರ್ಘ ವಾದ ಮಂಡಿಸಿದ್ದರು. ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರ ಪರವಾಗಿ ಹಿರಿಯ ವಕೀಲರಾದ ಕೆ.ಜಿ.ರಾಘವನ್ ಮತ್ತಿತರ ವಕೀಲರು ವಾದ ಮಂಡಿಸಿದ್ದರು.
2024ರ ಜುಲೈ 26ರಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ (ಪಿಸಿ ಆ್ಯಕ್ಟ್) 17ಎ, 19 ಮತ್ತು ಭಾರತೀಯ ನ್ಯಾಯಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಸೆಕ್ಷನ್ 218ರ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿದ್ದರು. ಅದೇ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ಇದಕ್ಕೆ ಮುಖ್ಯಮಂತ್ರಿಗಳು ವಿವರವಾದ ಪ್ರತಿಕ್ರಿಯೆ ನೀಡಿದ್ದರು. ಜೊತೆಗೆ, ಸಂಪುಟದ ಸಲಹೆ ಹೊರತಾಗಿಯೂ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆಗಸ್ಟ್ 16ರಂದು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರತಿಕ್ರಿಯೆಯಲ್ಲಿ ಕಾನೂನು ಮತ್ತು ವಾಸ್ತವಿಕತೆಗಳನ್ನು ಸ್ಪಷ್ಟವಾಗಿ ವಿವರಿಸಿದ್ದರೂ, ಅವುಗಳನ್ನು ಪರಿಗಣಿಸದೆ ಅನುಮತಿ ನೀಡಲಾಗಿದೆ. ರಾಜ್ಯಪಾಲರ ಈ ನಡೆ ಸ್ಪಷ್ಟವಾಗಿ ಸ್ವಾಭಾವಿಕ ನ್ಯಾಯದ ಉಲ್ಲಂಘನೆ ಹಾಗು ವಿವೇಚನಾರಹಿತವಾಗಿದ್ದು, ಪಿಸಿ ಕಾಯ್ದೆಯ ಸೆಕ್ಷನ್ 17ಎ ಮತ್ತು 19ರ ಬಿಎನ್ಎಸ್ಎಸ್ ಸೆಕ್ಷನ್ 218ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಸಿದ್ದರಾಮಯ್ಯ ಅರ್ಜಿಯಲ್ಲಿ ಕೋರಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿಯಮ ಬಾಹಿರವಾಗಿ ನಿವೇಶನಗಳನ್ನು ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಆದೇಶದ ವಿಸ್ತೃತವಾದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ವಿಚಾರಣೆ ವೇಳೆ ಮುಖ್ಯಮಂತ್ರಿಗಳ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪ್ರೊ. ರವಿವರ್ಮಕುಮಾರ್ ಸುದೀರ್ಘ ವಾದ ಮಂಡಿಸಿದ್ದರು. ರಾಜ್ಯಪಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರ ಪರವಾಗಿ ಹಿರಿಯ ವಕೀಲರಾದ ಕೆ.ಜಿ. ರಾಘವನ್ ಮತ್ತಿತರ ವಕೀಲರು ವಾದ ಮಂಡಿಸಿದ್ದರು.
ತೀರ್ಪು ಪ್ರಕಟಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಕಮಿಷನರೇಟ್ ವ್ಯಾಪ್ತಿಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಎಸ್ಪಿ ಹಾಗೂ ಡಿಸಿಪಿಗಳಿಗೆ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಸೂಚಿಸಿದ್ದಾರೆ.