Published
3 months agoon
By
Akkare Newsರೈತ ಹೋರಾಟಕ್ಕೆ ಬೆದರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಮಾಡಿರುವ ಮೂರು ವಿವಾದಾತ್ಮಕ ರೈತ ವಿರೋಧಿ ಕಾನೂನನ್ನು ಕೇಂದ್ರ ಸರ್ಕಾರ ವಾಪಾಸು ತರಬೇಕು ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಹೇಳಿದ್ದು, ಮತ್ತೊಮ್ಮೆ ವಿವಾದ ಹುಟ್ಟುಹಾಕಿದ್ದಾರೆ. “ಈ ಹೇಳಿಕೆ ವಿವಾದಾಸ್ಪದವಾಗಬಹುದು ಎಂದು ನನಗೆ ತಿಳಿದಿದೆ. ಆದರೆ ಮೂರು ಕೃಷಿ ಕಾನೂನುಗಳನ್ನು ಮತ್ತೆ ತರಬೇಕು. ರೈತರೇ ಅದನ್ನು ಒತ್ತಾಯಿಸಬೇಕು.” ಎಂದು ಹಿಮಾಚಲ ಪ್ರದೇಶದ ತನ್ನ ಕ್ಷೇತ್ರ ಮಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
“ಮೂರು ಕಾನೂನುಗಳು ರೈತರಿಗೆ ಪ್ರಯೋಜನಕಾರಿಯಾಗಿವೆ. ಆದರೆ ಕೆಲವು ರಾಜ್ಯಗಳಲ್ಲಿ ರೈತ ಗುಂಪುಗಳ ಪ್ರತಿಭಟನೆಯಿಂದಾಗಿ ಸರ್ಕಾರವು ಅದನ್ನು ರದ್ದುಗೊಳಿಸಿದೆ. ರೈತರು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ. ಅವರ ಒಳಿತಿಗಾಗಿ ಕಾನೂನುಗಳನ್ನು ವಾಪಾಸು ಪರಿಚಯಿಸುವಂತೆ ನಾನು ಅವರಿಗೆ ಮನವಿ ಮಾಡಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ರಣಾವತ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪಕ್ಷವು ಅದನ್ನು ಎಂದಿಗೂ ಮಾಡಲು ಬಿಡುವುದಿಲ್ಲ ಎಂದು ಹೇಳಿದೆ. “ಮೂರು ಕರಾಳ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ 750 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರನ್ನು ಮರಳಿ ತರಲು ಪ್ರಯತ್ನಿಸಲಾಗುತ್ತಿದೆ. ಇದನ್ನು ನಾವು ಎಂದಿಗೂ ಬಿಡುವುದಿಲ್ಲ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ. ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯನ್ನು ಬೆಟ್ಟು ಮಾಡಿದ ಅವರು, ಇದಕ್ಕೆ ಹರಿಯಾಣವೆ ಮೊದಲು ಉತ್ತರಿಸುತ್ತದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎಎಪಿ ಸಂಸದ ಮಲ್ವಿಂದರ್ ಸಿಂಗ್ ಕಾಂಗ್, “ಪ್ರಧಾನಿ ಮೋದಿಯ ಬಗ್ಗೆ ನನಗೆ ವಿಷಾದವಿದೆ. ಕಂಗನಾ ಪ್ರಧಾನಿ ಮೋದಿ ಸವಾಲು ಹಾಕುತ್ತಿರುವಂತೆ ತೋರುತ್ತಿದೆ. ಅಥವಾ ಮೋದಿ ಅಸಹಾಯಕರಾಗಿದ್ದಾರೆ, ಇದನ್ನು ಬಿಜೆಪಿ ಮಾತ್ರ ಹೇಳಬಲ್ಲದು” ಎಂದು ಹೇಳಿದ್ದಾರೆ.
ನಟಿ ಮತ್ತು ಸಂಸದ ಕಂಗನಾ ರಣಾವತ್ ಅವರು ಮೂರು ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷ ಆಂದೋಲನದ ನಡೆಸಿದ್ದ ರೈತ ವಿರುದ್ಧ ಪದೇ ಪದೇ ಹೇಳಿಕೆ ನೀಡಿದ್ದರು. 2020 ರಲ್ಲಿ, ಕಂಗನಾ ರಣಾವತ್ ಅವರು ಪ್ರತಿಭಟನೆಗಳನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದರು ಮತ್ತು ಈ ವಿಷಯದ ಬಗ್ಗೆ ಪಂಜಾಬಿ ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸಾರ್ವಜನಿಕವಾಗಿ ಜಗಳವಾಡಿದ್ದರು.
ಇತ್ತೀಚೆಗೆ, ಕಂಗನಾ ರಣಾವತ್ ಅವರು ರೈತ ಪ್ರತಿಭಟನೆಗಳಿಂದ “ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ” ನಿರ್ಮಾಣವಾಗುತ್ತಿತ್ತು ಎಂದು ಹೇಳಿದ್ದರು ಮತ್ತು ಆಂದೋಲನದ ಸ್ಥಳಗಳಲ್ಲಿ ಮೃತ ದೇಹಗಳು ನೇಣು ಬಿಗಿದುಕೊಂಡಿತ್ತು ಹಾಗೂ ಅತ್ಯಾಚಾರಗಳು ನಡೆಯುತ್ತಿತ್ತು ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ವ್ಯಾಪಕ ಪ್ರತಿಭಟನೆಗೆ ವ್ಯಕ್ತವಾಗಿದ್ದು, ಬಿಜೆಪಿ ಅವರ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು ಮತ್ತು ಅಂತಹ ಹೇಳಿಕೆಗಳಿಂದ ಅವರನ್ನು ದೂರವಿರಲು ಒತ್ತಾಯಿಸಿತ್ತು.