Published
3 months agoon
By
Akkare Newsಪ್ರತಿಷ್ಠಿತ ಐಐಟಿ ಧನ್‌ಬಾದ್‌ಗೆ ಪ್ರವೇಶ ಪಡೆಯಲು ದಲಿತ ವಿದ್ಯಾರ್ಥಿ ಪಾವತಿಸಬೇಕಾದ ಶುಲ್ಕ ₹17,500. ಶುಲ್ಕವನ್ನು ಪಾವತಿಸಲು ವಿದ್ಯಾರ್ಥಿಗೆ ನಾಲ್ಕು ದಿನಗಳ ಸಮಯವಿತ್ತು. ಉತ್ತರ ಪ್ರದೇಶದ ವಿದ್ಯಾರ್ಥಿಯ ತಂದೆ ತನ್ನ ಕೈಲಾದಷ್ಟು ಪ್ರಯತ್ನಿಸಿದರು. ಆದರೆ, ಹಣ ಹೊಂದಿಸಲಾಗದೆ ಶುಲ್ಕದ ಗಡುವನ್ನು ಅವರು ತಪ್ಪಿಸಿಕೊಂಡರು. ನಂತರ, ಅವರು ತಮ್ಮ ಹೋರಾಟವನ್ನು ನ್ಯಾಯಾಲಯಕ್ಕೆ ಕೊಂಡೊಯ್ದರು.
ಮೂರು ತಿಂಗಳ ಕಾಲ ತಂದೆ ಎಸ್‌ಸಿ/ಎಸ್‌ಟಿ ಆಯೋಗದ ಸುತ್ತು ಹಾಕಿದರು, ನಂತರ ಜಾರ್ಖಂಡ್ ಮತ್ತು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೆ ಅವರು ಸುಪ್ರೀಂ ಕೋರ್ಟಿಗೆ ಬರಬೇಕಾಯಿತು.
“ಇಂತಹ ಯುವವಕನ ಪ್ರತಿಭೆ ವ್ಯರ್ಥವಾಗಲು ನಾವು ಅನುಮತಿಸುವುದಿಲ್ಲ. ಅವರು ಜಾರ್ಖಂಡ್ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೋದರು, ನಂತರ ಚೆನ್ನೈ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮತ್ತು ನಂತರ ಅವರನ್ನು ಹೈಕೋರ್ಟ್‌ಗೆ ಕಳುಹಿಸಲಾಗುತ್ತದೆ. ದಲಿತ ಹುಡುಗನನ್ನು ಹೀಗೆ ಓಡಿಸಲಾಗುತ್ತಿದೆ” ಎಂದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ವಿದ್ಯಾರ್ಥಿಗೆ ಪ್ರವೇಶ ನೀಡುವಂತೆ ಐಐಟಿಗೆ ಆದೇಶಿಸಿದರು.
ಅಂತಿಮವಾಗಿ, ಸೋಮವಾರ ತನ್ನ ಅಸಾಧಾರಣ ಅಧಿಕಾರ ಬಳಸಿದ ಸುಪ್ರೀಂ ಕೋರ್ಟ್, ಶುಲ್ಕವನ್ನು ಠೇವಣಿ ಮಾಡಲು ಗಡುವು ತಪ್ಪಿಸಿಕೊಂಡಿದ್ದ ದಲಿತ ಯುವಕನಿಗೆ ಪ್ರವೇಶ ನೀಡುವಂತೆ ಧನ್‌ಬಾದ್‌ಗೆ ಐಐಟಿಗೆ ನಿರ್ದೇಶನ ನೀಡಿತು.
“ಅರ್ಜಿದಾರರಂತಹ ಪ್ರತಿಭಾವಂತ ವಿದ್ಯಾರ್ಥಿ ಅಂಚಿಗೆ ಒಳಗಾದ ಗುಂಪಿಗೆ ಸೇರಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಯ ಪ್ರತಿಭೆ ವ್ಯರ್ಥವಾಗುವುದಕ್ಕೆ ಬಿಡಬಾರದು. ಅವರಿಗೆ ಪ್ರವೇಶ ನೀಡುವಂತೆ ಐಐಟಿ ಧನ್‌ಬಾದ್‌ಗೆ ನಾವು ನಿರ್ದೇಶಿಸುತ್ತೇವೆ” ಎಂದರು.
5 ಕ್ಕೆ ಬಂದ್ ಆಗಬೇಕಿದ್ದ ಪೋರ್ಟಲ್ ಅನ್ನು ಸಂಜೆ 4:45 ಕ್ಕೆ ಮುಚ್ಚಲಾಯಿತು; ನಮ್ಮ ಪಾವತಿಯನ್ನು ಪ್ರಕ್ರಿಯೆಗೊಳಿಸಲಾಗಿಲ್ಲ ಎಂದು ಅರ್ಜಿದಾರರು ಕೋರ್ಟಿಗೆ ಹೇಳಿದರು. “ಅರ್ಜಿದಾರರಿಗೆ ಐಐಟಿ ಧನ್‌ಬಾದ್‌ನಲ್ಲಿ ಸೀಟು ನೀಡಲಾಗಿದೆ, ಇದು ಅವರ ಕೊನೆಯ ಅವಕಾಶ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.