Published
3 months agoon
By
Akkare Newsರೈಲ್ವೇಯನ್ನು ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದು, ರೈಲು ಸಾರಿಗೆಯು ಎಲ್ಲರಿಗೂ ಕೈಗೆಟಕುವ ದರದಲ್ಲಿ ಸೇವೆಯನ್ನು ಒದಗಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. “400 ರೂ.ಗಿಂತ ಕಡಿಮೆ ವೆಚ್ಚದಲ್ಲಿ 1,000 ಕಿಲೋಮೀಟರ್ಗಳವರೆಗೆ ಜನರು ಆರಾಮವಾಗಿ ಪ್ರಯಾಣಿಸಬಹುದೆಂದು ಖಚಿತಪಡಿಸಿಕೊಳ್ಳಲು ರೈಲ್ವೆ ಕಾರ್ಯನಿರ್ವಹಿಸುತ್ತಿದೆ. ಜನರ ಅನುಕೂಲಕ್ಕಾಗಿ 12,500 ಸಾಮಾನ್ಯ ದರ್ಜೆಯ ಕೋಚ್ಗಳನ್ನು ರೈಲ್ವೆ ತಯಾರಿಸಲಾಗುತ್ತಿದೆ” ಎಂದು ಅಶ್ವಿನಿ ಹೇಳಿದ್ದಾರೆ.
“ಮುಂದಿನ ಐದು ವರ್ಷಗಳಲ್ಲಿ ರೈಲ್ವೇ ಸಂಪೂರ್ಣ ಬದಲಾವಣೆಗೆ ಒಳಗಾಗಲಿದೆ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ‘ಕವಚ’ ಎಂಬ ಘರ್ಷಣೆ-ನಿರೋಧಕ ಸಾಧನವನ್ನು ಹೊಂದಿದ ವಂದೇ ಭಾರತ್ ಮತ್ತು ನಮೋ ಭಾರತ್ನಂತಹ ರೈಲುಗಳು ಈ ಬದಲಾವಣೆಗೆ ಕಾರಣವಾಗುತ್ತವೆ. ಇದು ಈಗ ಪ್ರಾರಂಭವಾಗಿದೆ” ಎಂದು ಅವರು ಮಹಾರಾಷ್ಟ್ರದ ನಾಸಿಕ್ನಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ರೈಸಿಂಗ್ ಡೇ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.
”ರೈಲ್ವೆಯ ಖಾಸಗೀಕರಣದ ಪ್ರಶ್ನೆಯೇ ಇಲ್ಲ. ಇಂತಹ ವದಂತಿಗಳನ್ನು ಹಬ್ಬಿಸುವವರು ರೈಲ್ವೇ ಮತ್ತು ರಕ್ಷಣೆ ಭಾರತದ ಎರಡು ಬೆನ್ನೆಲುಬುಗಳು ಎಂಬುದನ್ನು ನೆನಪಿಟ್ಟುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಮತ್ತು ಈ ರೀತಿಯ ಎಲ್ಲಾ ರಾಜಕೀಯದಿಂದ ದೂರವಿರಬೇಕು” ಎಂದು ವೈಷ್ಣವ್ ಹೇಳಿದ್ದಾರೆ.
ಭಾರತೀಯ ರೈಲ್ವೆಯಾದ್ಯಂತ ಪರಿವರ್ತನೆಯ ಯುಗ ಪ್ರಾರಂಭವಾಗಿದೆ ಎಂದು ಅವರು ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೇ ರಾಜಕೀಯದ ಯುಗವನ್ನು ಕೊನೆಗೊಳಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. “ನಾವು ಕಾರ್ಯಕ್ಷಮತೆ, ಸುರಕ್ಷತೆ, ತಂತ್ರಜ್ಞಾನ ಮತ್ತು ಎಲ್ಲರಿಗೂ ಕೈಗೆಟುಕುವ ಸೇವೆಯನ್ನು ಒದಗಿಸುವತ್ತ ಗಮನ ಹರಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಇವೆಲ್ಲವನ್ನೂ ಪೂರೈಸಲು ಮೋದಿ ಸರ್ಕಾರ ರೈಲ್ವೇ ಬಜೆಟ್ಗೆ ದೊಡ್ಡ ಒತ್ತು ನೀಡಿದ್ದು, ಪ್ರಸ್ತುತ ರೈಲ್ವೆ ಬಜೆಟ್ 2.5 ಲಕ್ಷ ಕೋಟಿ ರೂ. ಆಗಿದೆ. ಕಳೆದ 10 ವರ್ಷಗಳಲ್ಲಿ 31,000 ಕಿಲೋಮೀಟರ್ಗಳಷ್ಟು ಹೊಸ ಟ್ರ್ಯಾಕ್ಗಳನ್ನು ಹಾಕಿದ ದಾಖಲೆಯನ್ನು ನಾವು ನಿರ್ಮಿಸಿದ್ದೇವೆ, ಇದು ಫ್ರಾನ್ಸ್ನ ನೆಟ್ವರ್ಕ್ಗಿಂತ ಹೆಚ್ಚಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.
ಕಳೆದ 10 ವರ್ಷಗಳ ಎನ್ಡಿಎ ಸರ್ಕಾರದ ಅವಧಿಯಲ್ಲಿ 40,000 ಕಿಮೀ ರೈಲು ಮಾರ್ಗವನ್ನು ವಿದ್ಯುದ್ದೀಕರಿಸಲಾಗಿದೆ. ಇದು ಕಳೆದ 60 ವರ್ಷಗಳಲ್ಲಿ ಮಾಡಿದ್ದಕ್ಕಿಂತ ದುಪ್ಪಟ್ಟು ಎಂದು ಅವರು ಹೇಳಿದ್ದಾರೆ. ಮುಂದಿನ ಆರು ವರ್ಷಗಳಲ್ಲಿ 3,000 ರೈಲು ಸೇವೆಗಳನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ರೈಲ್ವೇ ಸಂರಕ್ಷಣಾ ಪಡೆ (ಆರ್ಪಿಎಫ್) ಕುರಿತು ಮಾತನಾಡಿದ ಅವರು, ಫೋರ್ಸ್ನ ವಲಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 35 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ಆದರೆ ಸೇವಾ ನಿಯಮಗಳು ಮತ್ತು ಬಡ್ತಿಗಳಿಗೆ ಸಂಬಂಧಿಸಿದ ಬೇಡಿಕೆಗಳು ಪರಿಗಣನೆಯಲ್ಲಿವೆ. ತಮಿಳುನಾಡಿನ ಆರ್ಪಿಎಫ್ ಶ್ವಾನದಳದ ವಲಯ ತರಬೇತಿ ಕೇಂದ್ರಕ್ಕೆ ಹೆಚ್ಚುವರಿಯಾಗಿ 5.5 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಚಿವರು ತಿಳಿಸಿದ್ದಾರೆ.