Published
3 months agoon
By
Akkare Newsಸಚಿವ ದಿನೇಶ್ ಗುಂಡೂರಾವ್ ಹೇಳಿಕೆಯನ್ನು ಟೀಕಿಸುವಾಗ ಅವರ ಪತ್ನಿಯ ಹೆಸರನ್ನು ಎಳೆದು ತಂದ ಕರ್ನಾಟಕ ಬಿಜೆಪಿಯ ಎಕ್ಸ್ ಹ್ಯಾಂಡಲ್ ವಿರುದ್ದ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ಈ ಕುರಿತು ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ (ತಬಸ್ಸುಮ್ ರಾವ್) ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ” ಸಕ್ರಿಯ ರಾಜಕಾರಣದಲ್ಲಿ ಇಲ್ಲದಿದ್ದರೂ ನನ್ನ ವಿರುದ್ಧ ನಿರಂತರ ಅವಹೇಳನಕಾರಿ ಹಾಗೂ ಕೋಮುವಾದಿ ಹೇಳಿಕೆ ನೀಡುತ್ತಿರುವ ಬಿಜೆಪಿ ವಿರುದ್ಧ ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ. ಮಹಿಳೆಯ ಮೇಲೆ ದಾಳಿ ಮಾಡುವುದು ಸಣ್ಣತನ. ಮಹಿಳೆಯರು ಗೌರವಕ್ಕೆ ಅರ್ಹರೇ ಹೊರತು, ನಿಂದನೆಗಲ್ಲ” ಎಂದು ಬರೆದುಕೊಂಡಿದ್ದಾರೆ.
ಏನಿದು ಪ್ರಕರಣ ? ಸಾವರ್ಕರ್ ಗೋಮಾಂಸ ಸೇವಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯನ್ನು ಟೀಕಿಸಿ ಪೋಸ್ಟ್ ಹಾಕಿದ್ದ ಬಿಜೆಪಿ “ಬ್ರಾಹ್ಮಣ ಸಮಾಜದ ವೀರ ಸಾವರ್ಕರ್ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ನಿಮಗೆ ನಿಮಗೆ ಬ್ರಾಹ್ಮಣ ಸಮಾಜದ ನಿಮ್ಮ ತಂದೆ ಗುಂಡೂರಾವ್ ಹೇಳಿದ್ದರೋ ಅಥವಾ ಮುಸ್ಲಿಂ ಸಮಾಜದ ನಿಮ್ಮ ಪತ್ನಿ ತಬಸ್ಸುಮ್ ಅವರು ಹೇಳಿದ್ದರೋ?” ಎಂದು ಬರೆದುಕೊಂಡಿತ್ತು.
ಬಿಜೆಪಿಯ ಈ ಪೋಸ್ಟ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ತಬಸ್ಸುಮ್ ಅವರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಯತ್ನಾಳ್‌ಗೆ ಕೋರ್ಟ್ ಛೀಮಾರಿ ಹಾಕಿತ್ತು
ಕೆಲ ತಿಂಗಳ ಹಿಂದೆ ಕೂಡ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವಾಗ ಅವರ ಪತ್ನಿಯನ್ನು ಎಳೆದು ತಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕರ್ನಾಟಕ ಹೈಕೋರ್ಟ್ ಛೀಮಾರಿ ಹಾಕಿತ್ತು.
“ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ” ಇದೆ ಎಂದು ಪರೋಕ್ಷವಾಗಿ ತಬಸ್ಸುಮ್ ಅವರನ್ನು ಉಲ್ಲೇಖಿಸಿ ಯತ್ನಾಳ್ ಕೋಮುವಾದಿ ಹೇಳಿಕೆ ಕೊಟ್ಟಿದ್ದರು. ಇದರ ವಿರುದ್ದ ತಬಸ್ಸುಮ್ ಪೊಲೀಸ್ ದೂರು ದಾಖಲಿಸಿದ್ದರು.