Published
3 months agoon
By
Akkare Newsದೇಶದ ಶ್ರೀಮಂತ ಮಹಿಳೆ ಇನ್ನು ಎಂಎಲ್ಎ.! ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧ್ಯವೇ ಇಲ್ಲ. ಆಡಳಿತ ವಿರೋಧಿ ಅಲೆಗೆ ಸಿಲುಕಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕನ್ಫರ್ಮ್ ಆಗುತ್ತಲೇ ಬಿಜೆಪಿ ಹೈಕಮಾಂಡ್ ತನ್ನ ಸ್ಟ್ರಾಟಜಿ ಎಲ್ಲವನ್ನೂ ಜಮ್ಮು ಕಾಶ್ಮೀರದತ್ತ ತಿರುಗಿಸಿತ್ತು. ನರೇಂದ್ರ ಮೋದಿ ಕೇವಲ ನಾಲ್ಕು ರೋಡ್ ಶೋ ಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ ಬಿಜೆಪಿ ಘಟಾನುಘಟಿಗಳು ಹರಿಯಾಣದತ್ತ ಮುಖವೇ ಹಾಕಲಿಲ್ಲ. ಸೋಲುವ ರಾಜ್ಯದಲ್ಲಿ ತಮ್ಮ ಹೆಸರು, ಖ್ಯಾತಿ ಎಲ್ಲವನ್ನೂ ಕಳೆದುಕೊಳ್ಳಲು ಅವರು ಇಷ್ಟ ಪಡಲಿಲ್ಲ.
ಎಲ್ಲಾ ಸಮೀಕ್ಷೆಗಳು ಬಿಜೆಪಿಗೆ ವಿರುದ್ಧವೇ ಆಗಿತ್ತು. ಆದರೆ ರಾಜ್ಯದ ಬಿಜೆಪಿ ನಾಯಕರ ಒಗ್ಗಟ್ಟು, ನಯಾಬ್ ಸಿಂಗ್ ಸೈನಿಯ ನೇತೃತ್ವ, ಕಾಂಗ್ರೆಸ್ ಪಕ್ಷದ ಭಿನ್ನಮತ, ದೌರ್ಬಲ್ಯವನ್ನು ಎನ್ ಕ್ಯಾಶ್ ಮಾಡಿಕೊಂಡು ಬಿಜೆಪಿ ಹೈಕಮಾಂಡ್ ತಬ್ಬಿಬ್ಬಾಗುವ ರೀತಿಯಲ್ಲಿ ವಿಜಯ ದುಂದುಭಿ ಬಾರಿಸಿದೆ. ಗೆಲುವು ನಮ್ಮದೇ ಅಂದುಕೊಂಡಿದ್ದ ಕಾಂಗ್ರೆಸ್ ಆತ್ಮವಿಶ್ವಾಸದಿಂದ ಬೀಗುತ್ತಲೇ ಗ್ರೌಂಡ್ ಮಟ್ಟದಲ್ಲಿ ಕೆಲಸ ಮಾಡದೇ ಮರ್ಮಾಘಾತ ಅನುಭವಿಸಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನುವ ಮಾತಿನಂತೆ ಸುಲಭದಲ್ಲಿ ಗೆಲ್ಲಬಹುದಾಗಿದ್ದ ರಾಜ್ಯವನ್ನು ಕಳೆದುಕೊಂಡಿದೆ.
ಹರಿಯಾಣದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಅಗ್ನಿಪಥ್ ಯೋಜನೆ, ರೈತರ ಪ್ರತಿಭಟನೆ, ರಾಜ್ಯದ ಕುಸ್ತಿಪಟುಗಳ ಲೈಂಗಿಕ ವಿಚಾರ ಗಳೆಲ್ಲವೂ ಕಾಂಗ್ರೆಸ್ ಗೆ ವರದಾನವಾಗಿತ್ತು. ಆದರೆ ಕಾಂಗ್ರೆಸ್ ಚೌಕಾಸಿಯ ಕಾರಣ ಹರಿಯಾಣ ಕಳೆದುಕೊಂಡಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಆಪ್ ಮಧ್ಯೆ ಮೈತ್ರಿ ಏರ್ಪಟ್ಟಿತ್ತು. ಇದರ ಪರಿಣಾಮ ಇಂಡಿಯಾ ಮೈತ್ರಿಕೂಟಕ್ಕೆ ಲಾಭವಾಗಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಆಪ್ 10 ಕ್ಷೇತ್ರಗಳನ್ನು ಕೇಳಿತ್ತು. ಆದರೆ ಕಾಂಗ್ರೆಸ್ ಈ ಬಾರಿ ಏಕಾಂಗಿಯಾಗಿ ಗೆಲ್ಲುವ ಧೈರ್ಯ ಇದ್ದುದರಿಂದ ಆಪ್ ಕೇಳಿದ ಸ್ಥಾನಗಳನ್ನು ಕೊಡಲು ನಿರಾಕರಿಸಿತು. ಮೈತ್ರಿ ಮುರಿದುಬಿಟ್ಟಿತು.
ಇದರಿಂದ ಆಪ್ ಎಲ್ಲಾ ಕಡೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಕಾಂಗ್ರೆಸ್ ಅಭ್ಯರ್ಥಿ ಬಹುತೇಕ ಸೋತ ಕಡೆ ಆಪ್ ಅಭ್ಯರ್ಥಿಗಳು ಗಮನಾರ್ಹ ಮತಗಳನ್ನು ಪಡೆದಿದ್ದರು. ಮತಗಳಿಕೆ ಪ್ರಮಾಣದಲ್ಲಿ ಬಿಜೆಪಿ ಗಿಂತ ಕಾಂಗ್ರೆಸ್ ಮುಂದಿದೆ. ಆದರೆ ಸೀಟು ಬಿಜೆಪಿಗೆ ಹೆಚ್ಚು ದಕ್ಕಿದೆ. ಬಹುತೇಕ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಚಿಲ್ಲರೆ ಮತಗಳಿಂದ ಸೋತಿದ್ದಾರೆ. ಗೆದ್ದೇ ಗೆಲ್ಲುತ್ತೇನೆ ಅನ್ನುವ ಭಂಡ ಧೈರ್ಯ, ಆಪ್ ನೊಂದಿಗೆ ಮೈತ್ರಿಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಹರ್ಯಾಣದ ಚಿತ್ರಣವೇ ಬದಲಾಗುತ್ತಿತ್ತು. ಆದರೆ ಕಾಂಗ್ರೆಸ್ ವಿವಿಧ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಮೈತ್ರಿ ಪಕ್ಷವನ್ನು ನಿಭಾಯಿಸುವ ರೀತಿಯಲ್ಲಿ ಎಡವುಟ್ಟಿರುವುದು ಕಾಂಗ್ರೆಸ್ ಇದಕ್ಕೆ ದೊಡ್ಡ ಬೆಲೆ ತೆರುತ್ತಿದೆ. ಇದರ ಲಾಭವನ್ನು ಬಿಜೆಪಿ ಪಡೆಯುತ್ತಿದೆ. ಇದರ ಜೊತೆಗೆ ಚಂದ್ರಶೇಖರ ಆಜಾದ್ ಪಕ್ಷ ಕೂಡ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಜಾತ್ಯತೀತ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಚೌಕಾಸಿ ತೋರಿದ್ದೇ ಹರಿಯಾಣ ಬಿಜೆಪಿ ಪಾಲಾಗಲು ಕಾರಣವಾಯಿತು.
ಹರಿಯಾಣದಲ್ಲಿ ಈ ಬಾರಿ 51 ಮಂದಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಒಲಂಪಿಕ್ ಕುಸ್ತಿಪಟು ವಿನೇಶ್ ಪೂಗಟ್ ಗೆಲುವು ಕಂಡಿದ್ದಾರೆ. ಜೊತೆಗೆ ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ಹಿಸ್ಸಾರ್ ವಿಧಾನಸಭಾ ಕ್ಷೇತ್ರದಲ್ಲಿ 19,000 ಮತಗಳಿಂದ ವಿಜಯಿಯಾಗಿದ್ದಾರೆ. ಅಲ್ಲಿನ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಕಮಲ್ ಗುಪ್ತ ತೃತೀಯ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ಭಾರತ ದೇಶದ ಅತ್ಯಂತ ಶ್ರೀಮಂತ ಮಹಿಳೆ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಹರಿಯಾಣ ಚುನಾವಣೆಯ ವಿಶೇಷತೆಗಳಲ್ಲೊಂದು.