Published
2 months agoon
By
Akkare Newsಬಿಎಸ್ ಯಡಿಯೂರಪ್ಪ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಅಡಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಡೆದಿದೆ ಎನ್ನಲಾದ ₹7,223.64 ಕೋಟಿ ಆರ್ಥಿಕ ಅಕ್ರಮಗಳ ಕುರಿತು ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ಪ್ರಾರಂಭಿಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಲಾಗಿದೆ. ಇದೀಗ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
“ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಯ ವೇಳೆ ನಡೆದಿರಬಹುದಾದ ಅವ್ಯವಹಾರಗಳ ತನಿಖೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ನಾ ಅವರ ನೇತೃತ್ವದ ವಿಚಾರಣಾ ಆಯೋಗವು ತನ್ನ ಮೊದಲ ವರದಿ ನೀಡಿದೆ. ಸದರಿ ವರದಿಯಲ್ಲಿ ಬೃಹತ್ ಪ್ರಮಾಣದ ಹಗರಣ ನಡೆದಿರುವುದಾಗಿ ಉಲ್ಲೇಖಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಬಹುದೆಂದು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿ, ಆದೇಶಿಸಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಿತಿಯಲ್ಲಿ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿದ್ದರೆ, ಸದಸ್ಯರಾಗಿ ಮಂತ್ರಿಗಳಾದ ಡಾ. ಜಿ.ಪರಮೇಶ್ವರ, ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಮತ್ತು ಶರಣ ಪ್ರಕಾಶ್ ಪಾಟೀಲ್ ಇದ್ದಾರೆ.
ಮಾಸ್ಕ್, ಔಷಧಿ, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅಕ್ರಮಗಳನ್ನು ವರದಿಯು ಬಹಿರಂಗಪಡಿಸಿದೆ. ಸರ್ಕಾರದ ಅನುಮೋದನೆಯಿಲ್ಲದೆ ಹಲವಾರು ವಸ್ತುಗಳನ್ನು ಖರೀದಿಸಲಾಗಿದೆ. ಸಾವಿನ ಗಣತಿಯನ್ನು ತಿರುಚುವುದು ಕೂಡ ಆರೋಪಗಳಲ್ಲಿ ಒಂದಾಗಿದೆ.