Published
2 months agoon
By
Akkare Newsಮದ್ರಸಾಗಳು ಮತ್ತು ಮದ್ರಸಾ ಮಂಡಳಿಗಳಿಗೆ ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಪತ್ರ ಬರೆದಿರುವುದು ಮುಸ್ಲಿಂ ಸಂಘಟನೆಗಳ ಭಾರೀ ವಿರೋಧಕ್ಕೆ ಕಾರಣವಾಗಿದೆ.
ಎನ್‌ಸಿಪಿಸಿಆರ್ ಮದ್ರಸಾ ಮಂಡಳಿಗಳನ್ನು ಸ್ಥಗಿತಗೊಳಿಸುವಂತೆ ಮತ್ತು ಮುಚ್ಚುವಂತೆಯೂ ಶಿಫಾರಸು ಮಾಡಿದೆ.
ದೇಶದ ವಿವಿಧ ಪ್ರಮುಖ ಮುಸ್ಲಿಂ ಸಂಘಟನೆಗಳು ಎನ್‌ಸಿಪಿಸಿಆರ್ ಶಿಫಾರಸನ್ನು ಕಟುವಾಗಿ ವಿರೋಧಿಸಿವೆ. ವಿಶೇಷವಾಗಿ ಕೇರಳದ ಪ್ರಭಾವಿ ಮುಸ್ಲಿಂ ಸಂಘಟನೆಗಳಾದ ಸಮಸ್ತ ಎಪಿ ಮತ್ತು ಇಕೆ ವಿಭಾಗ ವಿರೋಧ ವ್ಯಕ್ತಪಡಿಸಿವೆ.
ಕೇರಳದ ಇಸ್ಲಾಮಿಕ್ ವಿದ್ವಾಂಸರ ಅತಿದೊಡ್ಡ ಸಂಘಟನೆಯಾದ ಸಮಸ್ತ ಕೇರಳ ಜಂ-ಇಯತುಲ್ ಉಲಮಾ (ಸಮಸ್ತ) ಸದಸ್ಯರು ಎನ್‌ಸಿಪಿಸಿಆರ್ ಶಿಫಾರಸು ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಾರ್ಯಸೂಚಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಸಮಸ್ತ ಮುಶಾವರದ ಸದಸ್ಯ ಉಮರ್ ಫೈಝಿ ಮುಕ್ಕಂ ಮಾತನಾಡಿ, ಈ ಶಿಫಾರಸ್ಸು ಮುಸ್ಲಿಮರನ್ನು ಗುರಿಯಾಗಿಸುವ ದೊಡ್ಡ ಕಾರ್ಯಸೂಚಿಯ ಭಾಗವಾಗಿದೆ ಎಂದಿದ್ದಾರೆ. ಜಮಾತ್-ಎ-ಇಸ್ಲಾಮಿ ಹಿಂದ್‌ನ ಕೇರಳ ರಾಜ್ಯ ಅಮೀರ್ ಪಿ ಮುಜೀಬ್ ರೆಹಮಾನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಸಿಪಿಎಂ ಮತ್ತು ಕಾಂಗ್ರೆಸ್ ನಾಯಕರು ಕೂಡ ಎನ್‌ಸಿಪಿಸಿಆರ್ ಪತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಎನ್‌ಸಿಪಿಸಿಆರ್ ಶಿಫಾರಸು ಕೇರಳದ ಮದ್ರಸಾಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ರಾಜ್ಯ ಸರ್ಕಾರವು ಇಲ್ಲಿನ ಮದ್ರಸಗಳಿಗೆ ಯಾವುದೇ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಸಮಸ್ತದ ಯುವ ಘಟಕವಾದ ಸುನ್ನಿ ಯುವಜನ ಸಂಘದ (ಎಸ್‌ವೈಎಸ್) ರಾಜ್ಯ ಕಾರ್ಯದರ್ಶಿ ಅಬ್ದುಸ್ಸಮದ್ ಪೂಕ್ಕೊಟೂರ್ ಹೇಳಿದ್ದಾರೆ.
ಎನ್‌ಸಿಪಿಸಿಆರ್ ಶಿಫಾರಸು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ. ಅದನ್ನು ವಾಪಸ್ ಪಡೆಯಬೇಕು ಎಂದು ಸಮಸ್ತ ಎಪಿ ವಿಭಾಗದ ಮದ್ರಸಾ ಅಧ್ಯಾಪಕರ ಸಂಘಟನೆ ಸುನ್ನಿ ಜಂ-ಇಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಕೇರಳ ಮತ್ತು ಕರ್ನಾಟಕದ ರಾಜ್ಯ ಘಟಕ ಹೇಳಿದೆ.
ಎನ್‌ಸಿಪಿಸಿಆರ್ ಶಿಫಾರಸು ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗದ ಮದ್ರಸಾಗಳಿಗೆ ಸದ್ಯಕ್ಕೆ ಪರಿಣಾಮ ಬೀರುವುದಿಲ್ಲ. ಈ ಶಿಫಾರಸನ್ನು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡರೆ ಉತ್ತರ ಭಾರತದ ಮದ್ರಸಾಗಳಿಗೆ ದೊಡ್ಡ ಮಟ್ಟಿನ ಪರಿಣಾಮ ಬೀರಬಹುದು. ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಮದ್ರಸಾಗಳಿಗೂ ಸಮಸ್ಯೆ ಆಗಬಹುದು. ಮುಂದೊಂದು ದಿನ ಕೇರಳ ಮತ್ತು ಕರ್ನಾಟಕ ಕರಾವಳಿಯ ಮದ್ರಸಾಗಳಿಗೂ ಸಮಸ್ಯೆ ಉಂಟು ಮಾಡಬಹುದು ಎಂಬುವುದು ಕೇರಳದ ಮುಸ್ಲಿಂ ಸಂಘಟನೆಗಳ ವಾದ.
ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಮದ್ರಸಾಗಳೆಂದರೆ ಬೆಳಿಗ್ಗೆ ಮತ್ತು ಸಂಜೆ ಒಂದೆರಡು ಗಂಟೆಗಳ ಕಾಲ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರಗಳಾಗಿವೆ. ಮದ್ರಸಾದ ಅವಧಿಯ ಬಳಿಕ ಮಕ್ಕಳು ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಾರೆ. ಹತ್ತನೇ ತರಗತಿ ಬಳಿಕ ವಸತಿ ಸಹಿತ ಧಾರ್ಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ಅಲ್ಲೇ ಪಿಯುಸಿ, ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮೂಲಕ ಧಾರ್ಮಿಕ ಶಿಕ್ಷಣ ಕೇಂದ್ರಗಳು ಸಮನ್ವಯ ಶಿಕ್ಷಣ ಕೇಂದ್ರಗಳಾಗಿ ಗುರುತಿಸಿಕೊಂಡಿವೆ.
ಎನ್‌ಸಿಪಿಸಿಆರ್ ಪತ್ರದಲ್ಲಿ ಏನಿದೆ?
“ಮುಸ್ಲಿಮರು ಅಥವಾ ಇನ್ಯಾರೆ ಆದರೂ, ಅವರೆಲ್ಲರೂ 2009ರ ಶಿಕ್ಷಣದ ಹಕ್ಕು ಕಾಯ್ದೆಯಡಿ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರವೇ ದಾಖಲಾಗಿರಬೇಕೆಂದು” ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಪತ್ರದಲ್ಲಿ ತಿಳಿಸಿದ್ದಾರೆ.
“ಆರ್‌ಟಿಇ ಕಾಯ್ದೆ-2009ರಿಂದ ಧಾರ್ಮಿಕ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿರುವುದು, ಕೇವಲ ಧಾರ್ಮಿಕ ಶಿಕ್ಷಣಸಂಸ್ಥೆಗಳಿಗೆ ಮಾತ್ರ ಹಾಜರಾಗುತ್ತಿರುವ ಮಕ್ಕಳನ್ನು ಸಾಮಾನ್ಯ ಶಿಕ್ಷಣ ವ್ಯವಸ್ಥೆಯಿಂದ ಹೊರಗಿಟ್ಟಂತಾಗಿದೆ. ಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ರೂಪಿಸಲಾದ ಕಾಯ್ದೆಯು ತಪ್ಪು ವ್ಯಾಖ್ಯಾನದಿಂದಾಗಿ ಅವಕಾಶ ವಂಚಿತರಾಗುವ ಹಾಗೂ ತಾರತಮ್ಯದ ಹೊಸ ಪದರಗಳು ಸೃಷ್ಟಿಯಾಗಿವೆ” ಎಂದು ಅವರು ಹೇಳಿದ್ದಾರೆ.
‘ಧರ್ಮದ ಪಾಲಕರು ಅಥವಾ ಹಕ್ಕುಗಳ ದಮನಕಾರರು : ಮಕ್ಕಳ ಸಾಂವಿಧಾನಿಕ ಹಕ್ಕುಗಳ ವರ್ಸಸ್ ಮದ್ರಸಾಗಳು ’ಎಂಬ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ವರದಿಯನ್ನು ಆಧರಿಸಿ ಕಾನೂಂಗೊ ಅವರು ಈ ಪತ್ರವನ್ನು ಬರೆದಿದ್ದಾರೆ.