ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಬೆಂಗಳೂರು ಪ್ರವಾಹ | ಸ್ಥಳಾಂತರಕ್ಕೆ ನಿರಾಕರಿಸಿದ 20 ಮನೆಯ ಬಾಗಿಲು ಒಡೆದು ತೆರವುಗೊಳಿಸಲು ಡಿಸಿಎಂ ಸೂಚನೆ

Published

on

ಬೆಂಗಳೂರಿನ ಭಾರಿ ಮಳೆಗೆ ಜಲಾವೃತಗೊಂಡಿರುವ ನಗರದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರವಾಹವಿದ್ದರೂ ಅಪಾರ್ಟ್‌ಮೆಂಟ್‌ಗೆ ಬೀಗ ಹಾಕಿ ಮನೆಯೊಳಗೆ ಇರುವವರನ್ನು ಬಾಗಿಲು ಒಡೆದು ಅವರನ್ನು ಅಲ್ಲಿಂದ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

 

ಭಾರಿ ಮಳೆಯ ಕಾರಣಕ್ಕೆ ಪ್ರವಾಹ ಇದ್ದರೂ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 20 ಫ್ಲ್ಯಾಟ್‌ಗಳ ಮಾಲೀಕರು ಒಳಗೆ ಬೀಗ ಜಡಿದು ತೆರವಿಗೆ ನಿರಾಕರಿಸಿದ್ದರಿಂದ ಬಾಗಿಲು ಒಡೆದು ಒಳನುಗ್ಗುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಸೂಚಿಸಿದ್ದಾರೆ.

 

 

 

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, “95%ದಷ್ಟು ತೆರವು ಕಾರ್ಯ ಪೂರ್ಣಗೊಂಡಿದ್ದು, 5%ದಷ್ಟು ಮಾತ್ರ ಬಾಕಿ ಇದೆ. 603 ಫ್ಲಾಟ್‌ಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕೇಂದ್ರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಾಗಿವೆ. ಹೆಚ್ಚಿನವರನ್ನು ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

 

ಅಪಾರ್ಟ್‌ಮೆಂಟ್‌ನ ಆಡಳಿತದೊಂದಿಗೆ ಮಾತುಕತೆ ನಡೆಸಿ ತುರ್ತು ಕಾರ್ಯಾಚರಣೆಗಾಗಿ ಬಿಬಿಎಂಪಿ ಅಪಾರ್ಟ್ಮೆಂಟ್ ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

 

“ನೀರು, ವಿದ್ಯುತ್ ಮತ್ತು ಆಹಾರ ಇಲ್ಲದೆ, ಮನೆಯೊಳಗೆ ಬೀಗ ಹಾಕಿಕೊಂಡಿರುವ ಸುಮಾರು 20 ಫ್ಲ್ಯಾಟ್ ಇವೆ. ಅದರಲ್ಲಿರುವ ಜನರ ಆರೋಗ್ಯಕ್ಕೆ ಅಪಾಯ ಇರುವುದರಿಂದ ಒಕ್ಕಲಿಗರ ಸಂಘ ಮತ್ತು ಪೊಲೀಸರ ನೆರವು ಪಡೆದು ಬಾಗಿಲು ಒಡೆದು ಅವರನ್ನು ರಕ್ಷಿಸಲು ಬಿಬಿಎಂಪಿಗೆ ಆದೇಶ ನೀಡಲಾಗಿದೆ’’ ಎಂದು ಶಿವಕುಮಾರ್ ಹೇಳಿದ್ದಾರೆ.

 

ನಿವಾಸಿಗಳು ತಮ್ಮ ಮನೆಗಳೊಂದಿಗೆ ಇರುವ ಭಾವನಾತ್ಮಕ ಸಂಬಂಧದ ಕಾರಣಕ್ಕೆ ಅದರಿಂದ ಹೊರಗೆ ಬರಲು ನಿರಾಕರಿಸಿರಬಹುದು, ಆದರೆ ಅವರ ಸುರಕ್ಷತೆಯೂ ನಮಗೆ ಮುಖ್ಯ ಎಂದು ಅವರು ಹೇಳಿದ್ದಾರೆ. ಅವರನ್ನು ಒಂದು ವಾರದವರೆಗೆ ಹತ್ತಿರದ ಹೋಟೆಲ್‌ಗಳಲ್ಲಿ ಇರಿಸಲಾಗುವುದು ಮತ್ತು ಪರಿಸ್ಥಿತಿ ಸಹಜವಾದ ನಂತರ ಅವರನ್ನು ತಮ್ಮ ಮನೆಗಳಿಗೆ ಹಿಂತಿರುಗುವಂತೆ ಕೇಳಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.

 

ಇದೇ ವೇಳೆ ಅವರು, ಪ್ರವಾಹದ ಮೂಲವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರದೇಶವು ಮೊದಲು ಜೌಗು ಪ್ರದೇಶವಾಗಿತ್ತು ಮತ್ತು ಹತ್ತಿರದ ಕೆರೆಯ ಬಫರ್ ವಲಯವಾಗಿತ್ತು. ಅಗತ್ಯ ಕ್ರಮ ಕೈಗೊಂಡು ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಯಾವುದೇ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಡಿಸಿಎಂ ಹೇಳಿದ್ದಾರೆ.

 

ಎನ್‌ಡಿಎಂಎಫ್‌ನೊಂದಿಗೆ ಮಳೆನೀರು ಚರಂಡಿಗಳನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಇದಕ್ಕಾಗಿ ವಿಶ್ವಬ್ಯಾಂಕ್‌ನಿಂದ ಹಣವನ್ನು ಕೋರಲಾಗುವುದು ಎಂದು ಅವರು ಒತ್ತಿ ಹೇಳಿದ್ದಾರೆ.

ಈ ಮರುವಿನ್ಯಾಸವನ್ನು ನಗರದಾದ್ಯಂತ ದೊಡ್ಡ ಪ್ರಮಾಣದಲ್ಲಿ ಮಾಡಗುವುದು ಎಂದ ಅವರು, “ನಾವು ಕೆರೆಗಳನ್ನು ಪುನಃಸ್ಥಾಪಿಸುತ್ತೇವೆ ಮತ್ತು ಅಡೆತಡೆಗಳನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement