ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಎಣ್ಣೆಪ್ರಿಯರಿಗೆ ಶಾಕ್! ನವೆಂಬರ್‌ 20ರಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್‌, ಯಾಕೆ?

Published

on

ರಾಜ್ಯದಲ್ಲಿ ವಿವಿಧ ಇಲಾಖೆಗಳ ಬಗ್ಗೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ. ವಿವಿಧ ಖಾತೆಗಳನ್ನು ಹೊಂದಿರುವ ರಾಜ್ಯ ಸರ್ಕಾರದ ಸಚಿವರ ಮೇಲೂ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಸದ್ದು ಮಾಡುತ್ತಿವೆ. ಇದೀಗ ಎಣ್ಣೆಪ್ರಿಯರ ನೆಚ್ಚಿನ ಅಬಕಾರಿ ಇಲಾಖೆಯಲ್ಲೂ ಭಾರಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

 

ರಾಜ್ಯದಲ್ಲಿರೋ ಮದ್ಯದಂಗಡಿ ಮಾಲೀಕರೇ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಅಬಕಾರಿ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಇದಕ್ಕೆ ಕಾರಣವಾಗಿರುವ ಅಬಕಾರಿ ಸಚಿವರನ್ನೇ ಮೊದಲು ಬದಲಾಯಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

 

 

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ನವೆಂಬರ್‌ 20ರಿಂದ ಎಲ್ಲ ಮದ್ಯದಂಗಡಿಗಳನ್ನು ಬಂದ್‌ ಮಾಡುವುದಾಗಿ ಮಾಲೀಕರು ಸರ್ಕಾರಕ್ಕೆ ವಾರ್ನಿಂಗ್‌ ಕೊಟ್ಟಿದ್ದಾರೆ.

ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಗುರುಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ಮಿತಿಮೀರುತ್ತಿದೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಭಾರಿ ಕಿರುಕುಳ ನೀಡುತ್ತಿದ್ದು, ಅಧಿಕಾರಿಗಳ ವರ್ಗಾವಣೆಗೆ ಕೋಟ್ಯಂತರ ಹಣ ವಸೂಲಿ ನಡೆಯುತ್ತಿದೆ ಎಂದು ಸಚಿವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

 

ಈಗಾಗಲೇ ಅಮಾನತುಗೊಂಡಿರುವ ಅಧಿಕಾರಿಗಳಿಗೆ ಯಾವುದೇ ಲಾಭದಾಯಕ ಹುದ್ದೆಗಳನ್ನು ನೀಡಬಾರದು. ಮೂರು ವರ್ಷ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ಸಲ್ಲಿಸಿದ ಅಧಿಕಾರಿಗಳನ್ನು ತಕ್ಷಣವೇ ಬೇರೆ ಜಿಲ್ಲೆಗಳಿಗೆ ಟ್ರಾನ್ಸ್‌ಫರ್‌ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಕಡೆ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಬಿದ್ದಿದ್ದರೆ, ಮತ್ತೊಂದೆಡೆ ಹಲವು ಇಲಾಖೆಗಳು ಭ್ರಷ್ಟಾಚಾರದ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿವೆ ಎಂದು ದೂರಿದೆ.

 

ಅಧಿಕಾರಿಗಳ ವರ್ಗಾವಣೆ, ನೇಮಕಾತಿ, ಲೈಸೆನ್ಸ್‌ ಟ್ರಾನ್ಸಫರ್‌ ದಂಧೆ, ಸನ್ನದುದಾರರ ಮೇಲೆ ದೌರ್ಜನ್ಯ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಸಿಲುಕಿ ಅಬಕಾರಿ ಇಲಾಖೆ ಗಬ್ಬೆದ್ದು ನಾರುತ್ತಿದೆ ಎಂದು ಆರೋಪಿಸಿದೆ. ಅಸಮರ್ಥ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿ, ಮದ್ಯದಂಗಡಿ ಮಾಲೀಕರು ಪ್ರತಿಭಟನೆ ನಡೆಸಿ ಭ್ರಷ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಇನ್ನು ಮದ್ಯದಂಗಡಿ ಮಾಲೀಕರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದರಿಂದ ಕೂಡಲೇ ಭ್ರಷ್ಟಾಚಾರಕ್ಕೆ ಬ್ರೇಕ್‌ ಹಾಕಬೇಕು ಎಂದು ಗಡುವು ನೀಡಿದ್ದಾರೆ. ಮುಂದಿನ ತಿಂಗಳೊಳಗೆ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಎಲ್ಲ ಮದ್ಯದಂಗಡಿಗಳನ್ನು ಬಂದ್‌ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಅಬಕಾರಿ ಸಚಿವರ ಮೇಲೆಯೇ ಮದ್ಯದಂಗಡಿ ಮಾಲೀಕರು ಗಂಭೀರ ಆರೋಪ ಮಾಡಿದ್ದು, ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವಂತೆ ಬಿಗಿಯಾದ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಸರ್ಕಾರ ಇದನ್ನು ಪುರಸ್ಕರಿಸದೇ ಇದ್ದರೆ, ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್‌ ಆಗುವ ಸಾಧ್ಯತೆ ಇದ್ದು, ಇದು ಎಣ್ಣೆ ಪ್ರಿಯರಿಗೆ ಆಘಾತ ತರಿಸುವ ಸುದ್ದಿ ಎನ್ನಲಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement