Published
5 days agoon
By
Akkare Newsಪ್ರಧಾನಿ ನರೇಂದ್ರ ಮೋದಿ ‘ವಂಚನೆ’ ಮೂಲಕ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದು, ಇವಿಎಂಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಉದ್ಯಮಿ ಎಲೋನ್ ಮಸ್ಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು ಇವಿಎಂಗಳ ನೈಜತೆಯನ್ನು ಅವರು ಪ್ರಶ್ನಿಸಿದ್ದಾರೆ.
“ಮೋದಿ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ, ಎಲ್ಲವೂ ಮೋಸ, ಅವರು ಮತದಾರರ ಪಟ್ಟಿಯಿಂದ 10,000 ಹೆಸರುಗಳನ್ನು ತೆಗೆದುಹಾಕುತ್ತಾರೆ ಅಥವಾ 10,000 ರಿಂದ 20,000 ಹೊಸ ಹೆಸರುಗಳನ್ನು ಸೇರಿಸುತ್ತಾರೆ. ಇದು ವಾಸ್ತವ ವಿಚಾರವಾಗಿದೆ, ಆದರೆ ಅದನ್ನು ಹೇಗೆ ಸಾಬೀತುಪಡಿಸುವುದು ಎಂಬುವುದೆ ಪ್ರಶ್ನೆಯಾಗಿದೆ,” ಎಂದು ಖರ್ಗೆ ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ನಾಯಕ ಹಾಗೂ ಭಾರತದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇವಿಎಂಗಳನ್ನು ಕಂಪ್ಯೂಟರ್ಗಳ ಮೂಲಕ ಬದಲಾಯಿಸಬಹುದು ಮತ್ತು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ತಜ್ಞರಾಗಿರುವ ಎಲೋನ್ ಮಸ್ಕ್ ಹೇಳಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
“…’ತೆಲಂಗಾಣ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ ಇವಿಎಂಗಳನ್ನು ದೂಷಿಸುವುದಿಲ್ಲ ಮತ್ತು ಬ್ಯಾಲೆಟ್ ಪೇಪರ್ಗಳ ಬಗ್ಗೆ ಮಾತನಾಡುವುದಿಲ್ಲ, ಆದರೆ ನಾವು ಗೆದ್ದಾಗ ಇವಿಎಂಗಳನ್ನು ಕಾಂಗ್ರೆಸ್ ದೂಷಿಸುತ್ತದೆ’ ಎಂದು ಬಿಜೆಪಿ ಹೇಳುತ್ತದೆ. ನಮಗೆ ಅವರ ತಂತ್ರ ತಿಳಿದಿದೆ. ಅವರಿಗೆ (ಬಿಜೆಪಿ) ಏನು, ಎಲ್ಲಿ ಮತ್ತು ಯಾರಿಗೆ ಮಾಡಬೇಕು ಎಂದು ಗೊತ್ತು” ಎಂದು ಖರ್ಗೆ ಹೇಳಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಾಂಗ್ರೆಸ್ನಿಂದ ಕಿತ್ತು ಪ್ರತ್ಯೇಕಿಸಲು ಸತತ ಪ್ರಯತ್ನ ನಡೆಯುತ್ತಿದೆ. ಆದರೆ ಅದು ಸಾಧ್ಯವಿಲ್ಲದ ವಿಚಾರ. ಏಕೆಂದರೆ ಅವರು ಕಾಂಗ್ರೆಸ್ ಸಿದ್ಧಾಂತವನ್ನು ದೃಢವಾಗಿ ನಂಬಿದ್ದರು ಮತ್ತು ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್ಎಸ್ಎಸ್ ಅನ್ನು ನಿಷೇಧಿಸಿದ್ದರು ಎಂದು ಖರ್ಗೆ ಹೇಳಿದ್ದಾರೆ.