Published
2 months agoon
By
Akkare Newsರಾಜ್ಯದಲ್ಲಿ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ದ ಮುಗಿಬಿದ್ದಿದ್ದಾರೆ. ಇದರಿಂದ ಭೂ ವ್ಯಾಜ್ಯವೊಂದು ಕೋಮು ಆಯಾಮ ಪಡೆದುಕೊಂಡಿದೆ.
ಬಿಜೆಪಿ ನಾಯಕರ ಆರೋಪಗಳಿಗೆ ಸರ್ಕಾರದ ಕಡೆಯಿಂದ ಸಿಎಂ ಆದಿಯಾಗಿ ಸಚಿವರು ಸ್ಪಷ್ಟನೆ ಕೊಟ್ಟರೂ, ರೈತರಿಗೆ ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡೆಯುವುದಾಗಿ ಸರ್ಕಾರ ಹೇಳಿದ್ದರೂ, ಬಿಜೆಪಿ ಪ್ರತಿಭಟನೆ ನಡೆಸುದಾಗಿ ಹೇಳಿದೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಮುಂದಾಗಿರುವುದು, ಅದಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿರುವಾಗ ಕರ್ನಾಟಕದಲ್ಲಿ ವಕ್ಫ್ ಜಮೀನು ವಿಚಾರ ಮುನ್ನಲೆಗೆ ತಂದಿರುವ ಬಿಜೆಪಿ, ವಕ್ಫ್ ಬೋರ್ಡ್‌ಗಳನ್ನೇ ರದ್ದುಗೊಳಿಸಬೇಕು ಎಂದು ಅಗ್ರಹಿಸುತ್ತಿದೆ.
ಆದರೆ, ಇದೇ ಬಿಜೆಪಿ 2014ರ ಲೋಕಸಭೆ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಒತ್ತುವರಿಯಾಗಿರುವ ವಕ್ಫ್ ಭೂಮಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿತ್ತು.
ಬಿಜೆಪಿ ಪ್ರಣಾಳಿಕೆಯ 17ನೇ ಪುಟದಲ್ಲಿ ‘ಅಲ್ಪಸಂಖ್ಯಾತರು-ಸಮಾನ ಅವಕಾಶ‘ ಎಂಬ ಶೀರ್ಷಿಕೆಯಡಿ “ಧಾರ್ಮಿಕ ನಾಯಕರ ಜೊತೆ ಸಮಾಲೋಚನೆ ನಡೆಸಿ ವಕ್ಫ್ ಮಂಡಳಿಗಳ ಸಬಲೀಕರಣ ನಡೆಸಲಾಗುವುದು. ಅನಧಿಕೃತವಾಗಿ ಒತ್ತುವರಿಯಾಗಿರುವ ವಕ್ಫ್ ಜಮೀನುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟವಾಗಿ ಹೇಳಿದೆ.
ಅಲ್ಲಿಯೇ ಕೆಳಗಿನ ಪ್ಯಾರಾದಲ್ಲಿ “ಅಲ್ಪ ಸಂಖ್ಯಾತರ ಸಂಸ್ಕೃತಿ ಮತ್ತು ಸ್ಮಾರಕಗಳನ್ನು ರಕ್ಷಣೆ ಮಾಡಲಾಗುವುದು. ಉರ್ದು ಭಾಷೆಯ ಸಂರಕ್ಷಣೆ ಮತ್ತು ಪ್ರಚಾರ ಮಾಡಲಾಗುವುದು” ಎಂದು ಭರವಸೆ ಕೊಟ್ಟಿರುವುದು ಗಮನಾರ್ಹ.
ಇಲ್ಲಿ ಬಿಜೆಪಿ ಕೊಟ್ಟ ಭರವಸೆಗಳು ತಪ್ಪು ಎಂದಲ್ಲ. ಆದರೆ, ಇದೇ ಬಿಜೆಪಿ ನಾಯಕರು ಕರ್ನಾಟಕ ಸರ್ಕಾರದ ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಅವರು ವಕ್ಫ್ ಭೂ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ವಕ್ಫ್ ಅದಾಲತ್ ನಡೆಸಿರುವುದನ್ನು ಮತ್ತು ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ, ಅದಕ್ಕೆ ಕೋಮು ಬಣ್ಣ ಬಳಿದಿರುವುದು ವಿಪರ್ಯಾಸ.
ಪ್ರಸ್ತುತ ವಕ್ಫ್ ವಿಚಾರದಲ್ಲಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ “ವಕ್ಫ್ ಅಲ್ಲಾಹನ ಆಸ್ತಿ, ಅದು ಸಮುದಾಯದ ಏಳಿಗಾಗಿ ನೀಡಿರುವ ಸ್ವತ್ತು. ಅದನ್ನು ಅತಿಕ್ರಮಣ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದರು.
ಬೊಮ್ಮಾಯಿ ಅವರ ಹಳೆಯ ಹೇಳಿಕೆಯ ವಿಡಿಯೋವನ್ನು ಕೆಲ ಮಾಧ್ಯಮಗಳು ಪ್ರಸಾರ ಮಾಡಿದಾಗ, “ಸಚಿವರಾದ ಝಮೀರ್ ಅಹ್ಮದ್ ಅವರು ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೋ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ, ವಕ್ಫ್ ಜಮೀನು ವಿಚಾರದಲ್ಲಿ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳು ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಬದಲು, ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಜೊತೆಗೆ ಸಿವಿಲ್ ವ್ಯಾಜ್ಯಕ್ಕೆ ಕೋಮು ಬಣ್ಣ ನೀಡಿದೆ.