ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ರಾಷ್ಟ್ರೀಯ ಅಂತರ ವಿವಿ ಕ್ರಾಸ್‌ಕಂಟ್ರಿ: ಉಪ್ಪಿನಂಗಡಿ ಕಾಲೇಜಿನಲ್ಲಿ ಭರದ ಸಿದ್ಧತೆ

Published

on

ಉಪ್ಪಿನಂಗಡಿ: ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾನಿಲಯಗಳ ಪುರುಷರ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ 2024 ನ.19ರಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ಸಿದ್ಧತೆ ಭರದಿಂದ ನಡೆಯುತ್ತಿದೆ.
ದೇಶಾದ ವಿವಿಧೆಡೆಯಿಂದ ಕ್ರೀಡಾಪಟುಗಳು, ಟೀಮ್ ಮ್ಯಾನೇಜರ್‌ಗಳು ಹಾಗೂ ತಾಂತ್ರಿಕ ತಂಡದವರು ಸೇರಿ ಸುಮಾರು 1,500 ಭಾಗವಹಿಸುವರು.
ಪೇಟೆಯ ವಿವಿಧೆಡೆ ಪೋಸ್ಟರ್, ಸ್ವಾಗತ ಕಮಾನುಗಳು ಸಿದ್ಧವಾಗುತ್ತಿವೆ. ಕ್ರೀಡಾಪಟುಗಳನ್ನು ಎದುರುಗೊಳ್ಳಲು ಸಂಗಮ ಕ್ಷೇತ್ರವಾದ ಉಪ್ಪಿನಂಗಡಿ ಪೇಟೆ ಅಣಿಯಾಗುತ್ತಿದೆ.

 

 

ಕಾಲೇಜು ಆವರಣದಲ್ಲಿ ವೇದಿಕೆ, ಕ್ರೀಡಾಂಗಣದ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಉಪ್ಪಿನಂಗಡಿಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ಕ್ರೀಡಾಕೂಟ ನೋಡಲು ಜನರೂ ಕಾಯುತ್ತಿದ್ದಾರೆ.

 

 

7 ಕಡೆ ವಸತಿ ವ್ಯವಸ್ಥೆ: ಕ್ರೀಡಾಪಟುಗಳು ಶನಿವಾರದಿಂದಲೇ ಉಪ್ಪಿನಂಗಡಿಗೆ ಬರುತ್ತಿದ್ದು, ಸುಮಾರು 50 ತಂಡಗಳು ಭಾಗವಹಿಸಲಿವೆ. ಒಂದು ತಂಡದಲ್ಲಿ ಆರು ಕ್ರೀಡಾಪಟುಗಳು, ಇಬ್ಬರು ಟೀಂ ಮ್ಯಾನೇಜರ್‌ಗಳು ಇರುತ್ತಾರೆ. ಅವರಿಗೆ ವಸತಿಗಾಗಿ ಈಗಾಗಲೇ ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢ ಶಾಲಾ ವಿಭಾಗ, ಉಪ್ಪಿನಂಗಡಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸೇಂಟ್‌ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಅರಫಾ ವಿದ್ಯಾ ಕೇಂದ್ರ ಹಾಗೂ ಹಿರೇಬಂಡಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ತಾಂತ್ರಿಕ ತಂಡ, ಅಧಿಕಾರಿಗಳಿಗೆ ಉಪ್ಪಿನಂಗಡಿಯ ವಸತಿ ಗೃಹಗಳಲ್ಲಿ, ಇಂದ್ರಪ್ರಸ್ಥ ವಿದ್ಯಾಲಯ, ಗಾಣಿಗ ಸಮುದಾಯ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

 

 

ನ.18ರ ರಾತ್ರಿಯಿಂದ ಕ್ರೀಡಾಳುಗಳಿಗೆ ಊಟದ ವ್ಯವಸ್ಥೆಯನ್ನು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪಿಸಲಾಗಿದೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಮಾಹಿತಿ ನೀಡಿದರು.
ನ.19ರಂದು ಮಧ್ಯಾಹ್ನ 2 ಗಂಟೆಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಿಂದ ಕ್ರೀಡಾ ಜ್ಯೋತಿಯ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಕಾಲೇಜು ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.

 

ಕಾಲೇಜು ಕ್ರೀಡಾಂಗಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಕ್ಕೆ ಪ್ರವೇಶಿಸುವ ಕ್ರೀಡಾಪಟುಗಳು ಗಾಂಧಿಪಾರ್ಕ್‌ ಮೂಲಕ ಬ್ಯಾಂಕ್ ರಸ್ತೆಯಾಗಿ ಬಸ್ ನಿಲ್ದಾಣ ಬಳಿಯ ವೃತ್ತಕ್ಕೆ ತೆರಳುವರು. ಅಲ್ಲಿ ತಿರುವು ಪಡೆದು ಮತ್ತೆ ಬೈಪಾಸ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆದು ಅಲ್ಲಿಂದ ಹಿರೇಬಂಡಾಡಿ-ಕೊಯಿಲ ರಸ್ತೆಯ ಮೂಲಕ ಹಿರೇಬಂಡಾಡಿ ಜಂಕ್ಷನ್ ಬಳಿಯಿರುವ ನ್ಯಾಯಬೆಲೆ ಅಂಗಡಿಯವರೆಗೆ ಸಾಗಲಿದೆ. ಅಲ್ಲಿ ತಿರುಗಿ ಅದೇ ರಸ್ತೆಯಾಗಿ ರಾಷ್ಟೀಯ ಹೆದ್ದಾರಿ ಪ್ರವೇಶಿಸಿ ಕಾಲೇಜು ಆವರಣಕ್ಕೆ ಬರಲಿವೆ. ಓಟದ ಒಟ್ಟು ದೂರ 10 ಕಿ.ಮೀ.
ಅಡೆತಡೆಯಾಗದಂತೆ ಎಚ್ಚರದ ಕ್ರಮ: ಓಟದ ಸಂದರ್ಭ ಕೆಲವು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಲುಗಡೆ ಮಾಡಲಾಗುತ್ತದೆ. ಓಟದ ಮಾರ್ಗದ ಉದ್ದಕ್ಕೂ ಮನೆ, ತಿರುವು ರಸ್ತೆ ಇರುವಲ್ಲಿ ಸ್ವಯಂಸೇವಕರು ನಿಲ್ಲಲಿದ್ದು, ರಸ್ತೆಗೆ ವಾಹನಗಳು, ನಾಯಿಗಳು ಪ್ರವೇಶಿಸದಂತೆ ಎಚ್ಚರ ವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಮುಂದೆ ಪೊಲೀಸ್ ವಾಹನ, ಆಯಂಬುಲೆನ್ಸ್ ಹಾಗೂ ಕೆಂಪು ಬಾವುಟ ಹೊಂದಿದ ವಾಹನ ಮಾರ್ಗಸೂಚಿಯಾಗಿ ಸಾಗಲಿದೆ. ಆರು ಪೈಲಟ್‌ಗಳು ಓಟದ ಮಾರ್ಗದುದ್ದಕ್ಕೂ ಬೈಕ್‌ನಲ್ಲಿ ಸಾಗಲಿದ್ದಾರೆ ಎಂದು ಪ್ರವೀಣ್ ಕುಮಾರ್ ಮಾಹಿತಿ ನೀಡಿದರು.

 

ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಸರ್ಕಾರಿ ಕಾಲೇಜಿಗೆ ರಾಷ್ಟ್ರ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲು ಅವಕಾಶ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಊರಿನ ಪ್ರಮುಖರು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ತಿಳಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement