Published
4 weeks agoon
By
Akkare Newsಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಆಡಳಿತರೂಢ ಬಿಜೆಪಿ 6 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಒಂದು ಕ್ಷೇತ್ರ ಬಿಜೆಪಿಯ ಮಿತ್ರ ಪಕ್ಷವಾದ ರಾಷ್ಟ್ರೀಯ ಲೋಕದಳ ತನ್ನದಾಗಿಸಿದೆ. ಉಳಿದ ಎರಡು ಕ್ಷೇತ್ರಗಳಲ್ಲಿ ರಾಜ್ಯ ಪ್ರಮುಖ ವಿಪಕ್ಷವಾದ ಸಮಾಜವಾದಿ ಪಕ್ಷ ಗೆದ್ದುಕೊಂಡಿದೆ.
ಉತ್ತರ ಪ್ರದೇಶದ ಕರ್ಹಾಲ್ ಕ್ಷೇತ್ರದ ಶಾಸಕರಾಗಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಂಸದರಾಗಿ ಆಯ್ಕೆಯಾದ ನಂತರ ಕ್ಷೇತ್ರವೂ ತೆರವುಗೊಂಡಿತ್ತು. ಇದೀಗ ಅವರ ಸೋದರಳಿಯ ತೇಜ್ ಪ್ರತಾಪ್ ಸಿಂಗ್ ಅವರು 1,04,304 ಮತಗಳನ್ನು ಪಡೆದು 14,725) ಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ. ಸಿಸಮಾವು ಕ್ಷೇತ್ರದಲ್ಲಿ ಕೂಡಾ ಸಮಾಜವಾದಿ ಪಕ್ಷವೂ ಗೆಲುವು ಕಂಡಿದ್ದು ಪಕ್ಷದ ಅಭ್ಯರ್ಥಿ ನಸೀಮ್ ಸೋಲಂಕಿ ಅವರು 69,714 ಮತಗಳನ್ನು ಪಡೆದು 8,564 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಬಿಜೆಪಿ ಒಟ್ಟು 6 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದು, ಕುಂದರ್ಕಿಯಲ್ಲಿ ಪಕ್ಷದ ಅಭ್ಯರ್ಥಿಯಾದ ರಾಮ್ವೀರ್ ಸಿಂಗ್, ಗಾಜಿಯಾಬಾದ್ನಲ್ಲಿ ಸಂಜೀವ್ ಶರ್ಮಾ, ಖೇರ್ನಲ್ಲಿ ಸುರೇಂದರ್ ದಿಲೇರ್, ಫೂಲ್ಪುರ್ನಲ್ಲಿ ದೀಪಕ್ ಪಟೇಲ್, ಕತಿಹಾರಿಯಲ್ಲಿ ಧರ್ಮರಾಜ್ ನಿಶಾದ್, ಮಜ್ವಾನ್ನಲ್ಲಿ ಸುಚಿಸ್ಮಿತ ಮೌರ್ಯ ಅವರು ಗೆದ್ದಿದ್ದಾರೆ.
ಉಳಿದಂತೆ ಮೀರಾಪುರದಲ್ಲಿ ರಾಷ್ಟ್ರೀಯ ಲೋಕದಳದ ಮಿಥಿಲೇಶ್ ಪಾಲ್ ಅವರು 84,304 ಮತಗಳನ್ನು ಪಡೆದು 30 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದದ್ದಾರೆ. ರಾಷ್ಟ್ರೀಯ ಲೋಕದಳವು ಈ ಹಿಂದೆ ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿಯಲ್ಲಿತ್ತು. ಈ ಮೈತ್ರಿಯನ್ನು ಮುರಿದು ಇತ್ತಿಚೆಗಷ್ಟೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಯನ್ನು ಸೇರಿಕೊಂಡಿತ್ತು.
ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿನ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅದಿತ್ಯನಾಥ್, “ಉತ್ತರ ಪ್ರದೇಶ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ-ಎನ್ಡಿಎ ಗೆಲುವು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ವಿ ನಾಯಕತ್ವ ಮತ್ತು ಮಾರ್ಗದರ್ಶನದ ಮೇಲೆ ಜನರ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ. ಈ ಗೆಲುವು ಡಬಲ್ ಇಂಜಿನ್ ಸರ್ಕಾರದ ಭದ್ರತೆ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ಸಮರ್ಪಿತ ಕಾರ್ಯಕರ್ತರ ದಣಿವರಿಯದ ಕಠಿಣ ಪರಿಶ್ರಮದ ಫಲಿತಾಂಶ.” ಎಂದು ಹೇಳಿದ್ದು, ಗೆಲುವಿಗಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ
ಒಟ್ಟು 9 ಕ್ಷೇತ್ರಗಳ ಉಪ ಚುನಾವಣೆ ಇದ್ದರೂ ಕಾಂಗ್ರೆಸ್ ಯಾವುದೇ ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲ. ಬದಲಾಗಿ ಇಂಡಿಯಾ ಮೈತ್ರಿಯ ಮಿತ್ರ ಪಕ್ಷವಾದ ಸಮಾಜವಾದಿ ಪಕ್ಷಕ್ಕೆ ತನ್ನ ಬೆಂಬಲ ಘೋಷಿಸಿತ್ತು.
ಅದಾಗ್ಯೂ, ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ ರಾಜ್ಯದ 80 ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಗೆದ್ದಿತ್ತು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದುಕೊಂಡಿತ್ತು.
2019 ರ ಲೋಕಸಭೆ ಚುನಾವಣೆಯಲ್ಲಿ 62 ಸಂಸದೀಯ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2024 ಲೋಕಸಭೆಯಲ್ಲಿ ಕೇಲವ 33 ಕ್ಷೇತ್ರಗಳಲ್ಲಿ ಗೆದ್ದಿತ್ತು. ಉತ್ತರ ಪ್ರದೇಶದಲ್ಲಿ ಪಕ್ಷದ ಮತಗಳ ಪ್ರಮಾಣವು 2019 ರಲ್ಲಿ ಸಾರ್ವಕಾಲಿಕ ಗರಿಷ್ಠವಾದ 49.9% ರಿಂದ 41.3% ಕ್ಕೆ ಇಳಿದಿತ್ತು.
ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಪ್ರಿಯಾಂಕಾ ಗಾಂಧಿ ಅವರನ್ನು ಅಭಿನಂದಿಸಿದ್ದಾರೆ. ವಯನಾಡ್ ಯಾವಾಗಲೂ ಕಾಂಗ್ರೆಸ್ ಪಕ್ಷದ ದೃಷ್ಟಿಯೊಂದಿಗೆ ಪ್ರಗತಿ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಆರಿಸಿಕೊಂಡಿದೆ. ಈ ಬಾರಿ ಅದು ಕಾಂಗ್ರೆಸ್ನೊಂದಿಗೆ ಸಮೃದ್ಧಿಯನ್ನು ತರಲು ಅಚಲವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸತ್ತಿನಲ್ಲಿ ವಯನಾಡ್ ಜನತೆಗೆ ನಿರ್ಭೀತ ಧ್ವನಿಯಾಗಲಿದ್ದಾರೆ ಮತ್ತು ಅವರನ್ನು ಅತ್ಯಂತ ಸಂಕಲ್ಪ ಮತ್ತು ಸಮರ್ಪಣೆಯೊಂದಿಗೆ ಪ್ರತಿನಿಧಿಸುತ್ತಾರೆ ಎಂದು ಅಭಿನಂದನೆಗಳನ್ನು ತಿಳಿಸಿದ್ದಾರೆ.