Published
5 days agoon
By
Akkare Newsಮುಡಾ ಹಗರಣ, ವಕ್ಫ್ ಅವ್ಯವಹಾರ ಮತ್ತು ನನ್ನ ಮೇಲಿನ 150 ಕೋಟಿ ರೂಪಾಯಿ ಆಮಿಷ ಆರೋಪದ ತನಿಖೆಯನ್ನು ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, “ನನ್ನ ಮೇಲಿನ 150 ಕೋಟಿ ರೂಪಾಯಿ ಆಮಿಷ ಆರೋಪದ ತನಿಖೆಯನ್ನು ಸಿಬಿಐಗೆ ಕೊಡಿ. ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ಕೊಟ್ಟಿರುವ ವರದಿಯನ್ನು ಮುಖ್ಯಮಂತ್ರಿಗಳು ಸ್ವೀಕರಿಸಿ ಸಿಬಿಐ ತನಿಖೆಗೆ ಕೊಡಲಿ. ಮುಡಾ ಹಗರಣವನ್ನೂ ಸಿಬಿಐ ತನಿಖೆ ಮಾಡಿಸಲಿ ಎಂದರು.
ಆಡಳಿತ ಪಕ್ಷದವರು ಕೆಲಸಕ್ಕೆ ಬಾರದ ಸಂಗತಿಗಳನ್ನು ಇವತ್ತು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಬಾಣಂತಿಯರು, ಹಸುಗೂಸುಗಳ ಸಾವು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬಾರದೆಂಬ ಉದ್ದೇಶ ಇದರ ಹಿಂದಿದೆ. ಯಡಿಯೂರಪ್ಪ ಅವರು ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಅವರನ್ನೇ ಗುರಿಯಾಗಿ ಇಟ್ಟುಕೊಂಡು ರಾಜಕೀಯವಾಗಿ ಮುಗಿಸುವ ದುರುದ್ದೇಶದಿಂದ ಅರೆಬರೆ ಬೆಂದ ಜಸ್ಟೀಸ್ ಕುನ್ಹ ಮಧ್ಯಂತರ ವರದಿಯನ್ನು ಇಟ್ಟುಕೊಂಡು ಎಫ್ಐಆರ್ ದಾಖಲಿಸಿದ್ದಾರೆ. ಇದರ ಜೊತೆಗೆ ಮುನಿರತ್ನ ವಿಚಾರವನ್ನೂ ಚರ್ಚಿಸಲು ಮುಂದಾಗಿದ್ದಾರೆ ಎಂದರು.
“ಸಿದ್ದರಾಮಯ್ಯನವರೇ ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಇದ್ಯಾವುದೂ ಹೊಸದಲ್ಲ. ಈ ಹಿಂದೆ ಯಡಿಯೂರಪ್ಪ ಅವರ ವಿರುದ್ದ ಸಿಎಜಿ ವರದಿ ಸಂಬಂಧ 25 ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ದಾಖಲಿಸಿ ಯಡಿಯೂರಪ್ಪ, ಬಿಜೆಪಿಯನ್ನು ಮುಗಿಸಲು ಪಿತೂರಿ ಮಾಡಲಾಗಿತ್ತು.ಯಡಿಯೂರಪ್ಪನವರು ಬಿಜೆಪಿ ಅಧ್ಯಕ್ಷರಾದರೆ ತಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗದು ಎಂದು ಯೋಚಿಸಿ ಆ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.
ಸದನದಲ್ಲಿ ಮಾತನಾಡಿದಾಗಲೂ ವಿಜಯೇಂದ್ರ ಅವರು ಸಿಬಿಐ ತನಿಖೆಗೆ ಕೊಡಿ ಎಂಬ ಮಾತನ್ನು ಹೇಳಿದ್ದರು. ಸಿದ್ದರಾಮಯ್ಯನವರಿಗೆ ಈಗ ಸಿಬಿಐ ಮೇಲೆ ನಂಬಿಕೆ ಬಂದಿದೆ ಎಂದು ಕಾಲೆಳೆದಿದ್ದರು.
ಮಾಣಿಪ್ಪಾಡಿ ಉಲ್ಟಾ ಹೊಡೆದ್ರೆ ನಾನೇನು ಮಾಡಲಿ? ಸಿದ್ದರಾಮಯ್ಯ
ಅನ್ವರ್ ಮಾಣಿಪ್ಪಾಡಿ ವಿಜಯೇಂದ್ರ ವಿರುದ್ದ ಆರೋಪ ಮಾಡಿದ ಬಳಿಕ ನಾನು ಪ್ರತಿಕ್ರಿಯಿಸಿದ್ದೇನೆ. ಈಗ ಅವರು ನಾನು ಆ ರೀತಿಯ ಹೇಳಿಕೆಯೇ ಕೊಟ್ಟಿಲ್ಲ ಎಂದರೆ ಏನು ಮಾಡಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯ ಸರ್ಕೀಟ್ ಹೌಸ್ನಲ್ಲಿ ಮಾತನಾಡಿದ ಅವರು “ವಕ್ಫ್ ಮಂಡಳಿಯ ಕುರಿತು ಸರ್ಕಾರ ವಿಧಾನಮಂಡಲದಲ್ಲಿ ಉತ್ತರ ನೀಡಬೇಕಿದೆ. ಸರ್ಕಾರದ ಕರ್ನಾಟಕದ ಚರ್ಚೆಗೂ ಸಿದ್ದವಿದೆ. ವಕ್ಫ್ ಮಂಡಳಿ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ದವಿದೆ ಎಂದು ತಿಳಿಸಿದರು.
ಏನಿದು 150 ಕೋಟಿ ಆಮಿಷ ಆರೋಪ?
ವಕ್ಪ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದ್ದು, ಪ್ರಧಾನಮಂತ್ರಿ ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.