ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಅಂಬೇಡ್ಕರ್‌ಗೆ ಅವಮಾನ | ಅಮಿತ್ ಶಾ ವಿರುದ್ಧ ಟಿಎಂಸಿಯಿಂದ ಹಕ್ಕುಚ್ಯುತಿ ನೋಟಿಸ್

Published

on

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ವಿರುದ್ಧ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರೇನ್ ಬುಧವಾರ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ನಿಯಮ 187 ರ ಅಡಿಯಲ್ಲಿ ನೋಟಿಸ್ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

 

ಸಂವಿಧಾನದ 75 ವರ್ಷಗಳ ಕುರಿತ ಚರ್ಚೆಗೆ ಉತ್ತರಿಸುತ್ತಾ ಗೃಹ ಸಚಿವರು ಮಂಗಳವಾರ ಮೇಲ್ಮನೆಯಲ್ಲಿ ನೀಡಿದ ಹೇಳಿಕೆಯನ್ನೂ ನೋಟಿಸ್ ಉಲ್ಲೇಖಿಸಿದೆ. ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳಿಂದ ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಪ್ರತಿಭಟನೆಗೆ ಸಾಕ್ಷಿಯಾದವು. ಇದರ ಪರಿಣಾಮವಾಗಿ ಉಭಯ ಸದನಗಳನ್ನು ಮುಂದೂಡಲಾಯಿತು. ಅಂಬೇಡ್ಕರ್‌ಗೆ ಅವಮಾನ

ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಅನ್ನು ಟೀಕಿಸಿದ್ದ ಅಮಿತ್ ಶಾ, ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ, ಏಳು ಜನ್ಮಗಳಲ್ಲೂ ಸ್ವರ್ಗದಲ್ಲಿ ಸ್ಥಾನ ಪಡೆಯಬಹುದಿತ್ತು ಎಂದು ಹೇಳಿದ್ದರು.

.

 

“ಅಭಿ ಏಕ್ ಫ್ಯಾಶನ್ ಹೋ ಗಯಾ ಹೈ – ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್. ಇತ್ನಾ ನಾಮ್ ಅಗರ್ ಭಗವಾನ್ ಕಾ ಲೇತೆ ತೋ ಸಾತ್ ಜನ್ಮೋನ್ ತಕ್ ಸ್ವರ್ಗ್ ಮಿಲ್ ಜಾತಾ” (ಈ ಒಂದು ಫ್ಯಾಶನ್ ಆಗಿ ಹೋಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್… ಇಷ್ಟು ಬಾರಿ ಭಗವಂತನ ಹೆಸರನ್ನು ಹೇಳಿದ್ದರೆ, ಏಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು) ಎಂದು ಅಮಿತ್ ಶಾ ರಾಜ್ಯ ಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ವೇಳೆ ಅವರು “ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ” ಎಂಬ ಎರಡು ದಿನಗಳ ಚರ್ಚೆಯ ಮುಕ್ತಾಯದಲ್ಲಿ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಈ ನಡುವೆ ಅಮಿತ್ ಶಾ ಅವರ ಹೇಳಿಕೆಯನ್ನು ಟಿಎಂಪಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ವಿರೋಧ ವ್ಯಕ್ತಪಡಿಸಿದ್ದು, ಬಿ.ಆರ್. ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಿಜೆಪಿಯ ಜಾತಿವಾದಿ ಮತ್ತು ದಲಿತ ವಿರೋಧಿ ಮನಸ್ಥಿತಿಯ ಪ್ರದರ್ಶನವಾಗಿದೆ ಎಂದು ಬುಧವಾರ ಹೇಳಿದ್ದಾರೆ. ಅಮಿತ್ ಶಾ ಅವರ ಹೇಳಿಕೆಗಳು ಅವಹೇಳನಕಾರಿ ಎಂದು ಕರೆದಿರುವ ಅವರು, ”ಅವರು ಹೇಳಿಕೆಯು ಮಾರ್ಗದರ್ಶನ ಮತ್ತು ಸ್ಫೂರ್ತಿಗಾಗಿ ಅಂಬೇಡ್ಕರ್‌ರನ್ನು ಎದುರು ನೋಡುವ ಲಕ್ಷಾಂತರ ಜನರಿಗೆ ಮಾಡಿದ ಅವಮಾನವಾಗಿದೆ” ಎಂದು ಹೇಳಿದ್ದಾರೆ.

“ಮುಖವಾಡ ಕಳಚಿದೆ! ಸಂಸತ್ತು ಸಂವಿಧಾನದ 75 ವೈಭವದ ವರ್ಷಗಳನ್ನು ಪ್ರತಿಬಿಂಬಿಸುತ್ತಿದೆ, ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಈ ಸಂದರ್ಭವನ್ನು ಕಳಂಕಗೊಳಿಸಲು ನೋಡಿದ್ದಾರೆ. ಅದೂ ಕೂಡಾ ಪ್ರಜಾಪ್ರಭುತ್ವದ ದೇವಾಲಯದಲ್ಲಿ…” ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

 

“ಇದು ಬಿಜೆಪಿಯ ಜಾತಿವಾದಿ ಮತ್ತು ದಲಿತ ವಿರೋಧಿ ಮನಸ್ಥಿತಿಯ ಪ್ರದರ್ಶನವಾಗಿದೆ. 240 ಸ್ಥಾನಗಳಿಗೆ ಇಳಿದಾಗಲೂ ಅವರು ಈ ರೀತಿ ವರ್ತಿಸಿದರೆ, ಒಂದು ವೇಳೆ ಅವರು 400 ಸ್ಥಾನಗಳು ಪಡೆದಿದ್ದರೆ ಅವರು ಉಂಟುಮಾಡುತ್ತಿದ್ದ ಹಾನಿಯನ್ನು ಊಹಿಸಿ. ಅವರು ಡಾ. ಅಂಬೇಡ್ಕರ್ ಅವರ ಕೊಡುಗೆಗಳ ಇತಿಹಾಸವನ್ನು ಸಂಪೂರ್ಣವಾಗಿ ಅಳಿಸಿ ಪುನಃ ಬರೆಯುತ್ತಿದ್ದರು” ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯ ಮೇಲೆ ದಾಳಿ ಮಾಡಿದ ಮಮತಾ ಅವರು, ದ್ವೇಷ ಮತ್ತು ಧರ್ಮಾಂಧತೆಯನ್ನು ಆಂತರಿಕಗೊಳಿಸಿದ ಪಕ್ಷದಿಂದ ಇನ್ನೇನು ನಿರೀಕ್ಷಿಸಬಹುದಿತ್ತು ಎಂದು ಹೇಳಿದ್ದಾರೆ. “ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳು ಮಾರ್ಗದರ್ಶನ ಮತ್ತು ಸ್ಫೂರ್ತಿಗಾಗಿ ಬಾಬಾಸಾಹೇಬರನ್ನು ಎದುರು ನೋಡುವ ಲಕ್ಷಾಂತರ ಜನರಿಗೆ ಮಾಡಿರುವ ಅವಮಾನವಾಗಿದೆ.” ಎಂದು ಅವರು ಹೇಳಿದ್ದಾರೆ.

 

“ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಪಿತಾಮಹ, ಈ ಅತಿರೇಕದ ಹೇಳಿಕೆಯು ಅವರ ಮೇಲಿನ ನೇರ ದಾಳಿ ಮಾತ್ರವಲ್ಲ, ಸಂವಿಧಾನದ ಕರಡು ಸಮಿತಿಯ ಎಲ್ಲಾ ಸದಸ್ಯರ ಮೇಲಿ ದಾಳಿಯಾಗಿದೆ. ಇದು ಎಲ್ಲಾ ಜಾತಿ, ಮತ, ಜನಾಂಗಗಳ ಸದಸ್ಯರೊಂದಿಗೆ ವಿವಿಧತೆಯಲ್ಲಿ ಭಾರತದ ಏಕತೆಯನ್ನು ಸಂಕೇತಿಸುತ್ತದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅವರ ಪೋಸ್ಟ್ ಅನ್ನು ಹಂಚಿಕೊಂಡಿರುವ ಟಿಎಂಸಿ, ಅಮಿತ್ ಶಾ ಅವರ ಹೇಳಿಕೆ ನಾಲಿಗೆ ಸ್ಲಿಪ್ ಆಗಿ ಹೇಳಿದ್ದಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಹೇಳಿದ ಮಾತಾಗಿದೆ ಎಂದು ಹೇಳಿದೆ. ಸಂಸತ್ತಿನಲ್ಲಿ ಅಮಿತ್ ಶಾ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಟಿಎಂಸಿ ಒತ್ತಾಯಿಸಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement