Published
3 days agoon
By
Akkare Newsದಂಡ ಕಟ್ಟದಿದ್ದರೆ ಸಾಮಾಜಿಕ ಬಹಿಷ್ಕಾರದ ಬೆದರಿಕೆಯೊಡ್ಡಿದ ಸವರ್ಣೀಯರು ; ಆರೋಪ
ಚಿಕ್ಕಮಗಳೂರು : ದಲಿತರು ದೇವಾಲಯದ ಕಾಂಪೌಂಡ್ ಪ್ರವೇಶಿಸಿದರೆಂಬ ಕಾರಣಕ್ಕೆ ಮೇಲ್ವರ್ಗದವರು ದೇವಾಲಯದ ಗೇಟ್‌ಗೆ ಬೀಗ ಹಾಕಿ ಪೂಜೆಯನ್ನೇ ಸ್ಥಗಿತಗೊಳಿಸಿದ್ದಲ್ಲದೆ 2.50 ಲಕ್ಷ ರೂ. ದಂಡ ವಿಧಿಸಿ ಅಸ್ಪೃಶ್ಯತೆ ಆಚರಿಸಿದ್ದಾರೆನ್ನಲಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹೋಬಳಿಯ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಡಿ.17ರಂದು ಮಂಗಳವಾರ ರಾತ್ರಿ ಗ್ರಾಮದ ಮಂಜಪ್ಪ ಮತ್ತು ಮದನ್ ಎಂಬವರು ಪೂಜೆ ಮಾಡಿಸಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿದ್ದು, ಈ ವೇಳೆ ಅವರು ದೇವಾಲಯದ ಕಾಂಪೌಂಡ್ ಒಳಗೆ ಬಂದಿದ್ದಾರೆಂದು ಆರೋಪಿಸಿದ ಸವರ್ಣೀಯರು ದೇವಾಲಯದಲ್ಲಿ ಪೂಜೆ ಸ್ಥಗಿತಗೊಳಿಸಿದ್ದಲ್ಲದೆ ಇಬ್ಬರು ದಲಿತ ಕುಟುಂಬದವರಿಗೆ 2.50 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ದಲಿತರು ದೇವಾಲಯದ ಕಾಂಪೌಂಡ್ ಒಳಗೆ ಬಂದಿದ್ದರಿಂದ ದೇವಾಲಯ ಮೈಲಿಗೆ ಆಗಿದೆ, ದೇವಾಲಯದ ಶುದ್ಧೀಕರಣ ಮಾಡಬೇಕಿದ್ದು, ಇದಕ್ಕಾಗಿ ದಲಿತರು 2.50ಲಕ್ಷ ರೂ. ದಂಡ ಕಟ್ಟಬೇಕು. ಈ ಹಣದಲ್ಲಿ ದೇವಾಲಯದ ಶುದ್ಧೀಕರಣ ಮಾಡಲಾಗುವುದು ಎಂದು ಸವರ್ಣೀಯರು ಹೇಳಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ನೊಂದ ಸಂತ್ರಸ್ತರು ಕಡೂರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ. ಆದರೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕಾಗಿದ್ದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂದು ಸಂತ್ರಸ್ತರು ದೂರಿದ್ದು, ಗುರುವಾರ ಚಿಕ್ಕಮಗಳೂರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ್ದ ಸಂತ್ರಸ್ತರು ಎಸ್ಪಿಗೆ ದೂರು ನೀಡಿ ಅಸ್ಪೃಶ್ಯತೆ ಆಚರಿಸಿದವರ ವಿರುದ್ಧ ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೀರೂರು ಹೋಬಳಿಯ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಲಿಂಗಾಯತ ಸಮುದಾಯದವರ ಮನೆಗಳಿದ್ದು, ಅಷ್ಟೇ ಸಂಖ್ಯೆಯಲ್ಲಿ ಅಲೆಮಾರಿ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದ ಮನೆಗಳೂ ಇವೆ. ಈ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದ್ದು, ಲಿಂಗಾಯತ ಸಮುದಾಯದ ಅರ್ಚಕರು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿ ದಲಿತರು ಪೂಜೆ ಸಲ್ಲಿಸಬೇಕಿದ್ದರೆ ದೇವಾಲಯದ ಕಾಂಪೌಂಡ್‌ನ ಹೊರ ಭಾಗದಲ್ಲಿ ನಿಂತು ಪೂಜೆ ಸಲ್ಲಿಸಬೇಕಿದ್ದು, ಈ ಪದ್ಧತಿ ಗ್ರಾಮದಲ್ಲಿ ಹಿಂದಿನಿಂದಲೂ ಇದೆ ಎನ್ನಲಾಗಿದೆ. ಲಿಂಗಾಯತ ಮತ್ತು ದಲಿತ ಸಮುದಾಯದವರು ಸೇರಿ ದೇವಾಲಯ ನಿರ್ಮಿಸಿದ್ದು, ಇದಕ್ಕಾಗಿ ಎರಡೂ ಸಮುದಾಯದವರು ವಂತಿಗೆ ಹಣ ನೀಡಿದ್ದಾರೆ ಎಂದು ತಿಳಿದುಬಂದಿದೆ.