ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

Published

on

ಮಂಗಳೂರು: ಮಂಗಳೂರು- ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸುವ ಬಹು ಕಾಲದ ಬೇಡಿಕೆಗೆ ಕೊನೆಗೂ ನೈಋತ್ಯ ಮತ್ತು ದಕ್ಷಿಣ ರೈಲ್ವೇ ವಲಯಗಳಿಂದ ಅನು ಮೋದನೆ ಸಿಕ್ಕಿದ್ದು, ಪ್ರಸ್ತಾವನೆ ಯನ್ನು ಈಗ ಅನುಮತಿಗಾಗಿ ರೈಲ್ವೇ ಮಂಡಳಿಗೆ ಸಲ್ಲಿಸಲಾಗಿದೆ.
ದಶಕಗಳ ಹಿಂದೆ ಮೀಟರ್‌ ಗೇಜ್‌ ಕಾಲದಲ್ಲಿ ಸುಬ್ರಹ್ಮಣ್ಯದಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತು ಮಂಗಳೂರು ವರೆಗೆ 2005ನೇ ಇಸವಿ ತನಕ 06484/85 ಹಾಗೂ 06486/87 ಪ್ಯಾಸೆಂಜರ್‌ ರೈಲು ಸಂಚರಿಸುತ್ತಿತ್ತು.

 

ಹಳಿ ಪರಿವರ್ತನೆಯ ಅನಂತರ ಇದು ಪುತ್ತೂರಿನವರೆಗೆ ಮಾತ್ರ ಸಂಚಾರ ನಡೆಸುತ್ತಿದೆ. ಅನೇಕ ವರ್ಷಗಳಿಂದ ಪ್ರಯಾಣಿಕರು ಮತ್ತು ಸ್ಥಳೀಯ ಮುಖಂಡರು ಈ ರೈಲನ್ನು ಸುಬ್ರಹ್ಮಣ್ಯ ತನಕ ವಿಸ್ತರಿಸಲು ಹೋರಾಟ ನಡೆಸುತ್ತಿದ್ದರು
ಸಂಸದ ಕ್ಯಾ|ಬ್ರಿಜೇಶ್‌ ಚೌಟ ಕೂಡ ಕಳೆದ ಜುಲೈಯಲ್ಲಿ ಸಂಸತ್ತಿನ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾವಿಸಿ ವಿಸ್ತರಣೆಗೆ ಆಗ್ರಹಿಸಿದ್ದರು
 

 

ಈ ರೈಲನ್ನು ಸುಬ್ರಹ್ಮಣ್ಯ ವರೆಗೆ ವಿಸ್ತರಣೆ ಮಾಡಬೇಕು ಎಂದು ಕೋರಿ ದಕ್ಷಿಣ ರೈಲ್ವೇಯ ಮಂಗಳೂರು ರೈಲ್ವೆ ಬಳಕೆದಾರ ಸಲಹಾ ಸಮಿತಿಯ ಸದಸ್ಯ ಹನುಮಂತ ಕಾಮತ್‌ ಅವರು ಪಾಲಕ್ಕಾಡ್‌ನ‌ಲ್ಲಿ ನಡೆದ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಎರಡು- ಮೂರು ವರ್ಷಗಳಿಂದ ನಿರಂತರವಾಗಿ ಪ್ರಸ್ತಾವನೆ ಮಂಡಿಸಿದ್ದರು. ರೈಲ್ವೇ ಸಂಘಟನೆಗಳು ದಕ್ಷಿಣ ಸಂಸದರ ಮುಖಾಂತರ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಿದ್ದವು.

 

ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಕಳೆದ ತಿಂಗಳು ದಕ್ಷಿಣ ರೈಲ್ವೇಯ ಚೆನ್ನೈ ಕಚೇರಿಯ ಅಧಿಕಾರಿಗಳನ್ನು ಭೇಟಿಯಾಗಿ ಈ ಪ್ರಸ್ತಾವನೆಯ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿದ್ದರು. ಈ ನಿರಂತರ ಪ್ರಯತ್ನದ ಬಳಿಕ ಈಗ ಎಲ್ಲ ತಾಂತ್ರಿಕ ಅಡೆತಡೆ ನಿವಾರಣೆಯಾಗಿದೆ. ರೈಲ್ವೇ ಇಲಾಖೆಯಿಂದ ನ. 18ರಂದು ರೈಲ್ವೇ ಮಂಡಳಿಗೆ ಕಳುಹಿಸಲಾಗಿದ್ದು, ಅಧಿಕೃತ ಅನುಮೋದನೆ ದೊರಕುವ ನಿರೀಕ್ಷೆ ಇದೆ.
ನಿತ್ಯ ಪಯಣಿಗರಿಗೆ ಪ್ರಯೋಜನ
ಈ ವಿಸ್ತರಣೆ ಅನುಷ್ಠಾನಗೊಂಡರೆ ಸುಬ್ರಹ್ಮಣ್ಯ ಕಡೆಗೆ ಪ್ರಯಾಣಿಸುವ ನೂರಾರು ನಿತ್ಯ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಮುಖ್ಯ ವಾಗಿ ಸುಳ್ಯದ ಗ್ರಾಮೀಣ ಭಾಗಗಳಿಂದ ಮಂಗಳೂರಿನ ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಇದು ಪ್ರಯೋಜನ ಒದಗಿಸಲಿದೆ.

 

ವೇಳಾಪಟ್ಟಿ ಹೇಗೆ?
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಈ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 4ಕ್ಕೆ ಹೊರಟು ಸುಬ್ರಹ್ಮಣ್ಯಕ್ಕೆ ಬೆಳಗ್ಗೆ 6.30ಕ್ಕೆ ತಲುಪಲಿದೆ. ಸುಬ್ರಹ್ಮಣ್ಯದಿಂದ ಬೆಳಗ್ಗೆ 7ಕ್ಕೆ ಹೊರಟು 9.30ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ. ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 6ಕ್ಕೆ ಹೊರಟು ರಾತ್ರಿ 8.15ಕ್ಕೆ ಸುಬ್ರಹ್ಮಣ್ಯ ತಲುಪಲಿದೆ. ಸುಬ್ರಹ್ಮಣ್ಯದಿಂದ ರಾತ್ರಿ 8.40 ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 11.15ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ.
ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ ಸಂಬಂಧ ನಾವು ಪ್ರಸ್ತಾವನೆ, ವೇಳಾಪಟ್ಟಿ ಬದಲಾವಣೆ ಕುರಿತ ವಿವರಗಳೊಂದಿಗೆ ನೈಋತ್ಯ ರೈಲ್ವೇಗೆ ಪ್ರಸ್ತಾವನೆ ಹಾಗೂ ಟಿಪ್ಪಣಿ ಕಳುಹಿಸಿದ್ದೇವೆ. ಅಲ್ಲಿಂದ ಮಂಡಳಿಗೆ ಕಳುಹಿಸುವ ಕೆಲಸವನ್ನು ಅವರು ಮಾಡಿರುತ್ತಾರೆ. -ಅರುಣ್‌ ಕುಮಾರ್‌ ಚತುರ್ವೇದಿ, ಡಿಆರ್‌ಎಂ, ಪಾಲಕ್ಕಾಡ್‌ ರೈಲ್ವೇ ವಿಭಾಗ
ಮಂಗಳೂರು- ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸುವ ಕುರಿತು ರೈಲ್ವೇ ಮಂಡಳಿಗೆ ನೈಋತ್ಯ ರೈಲ್ವೇಯಿಂದ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ರೈಲ್ವೇ ಮಂಡಳಿ ಹಾಗೂ ರೈಲ್ವೇ ಸಚಿವರಿಬ್ಬರನ್ನೂ ಈ ಕುರಿತು ಆಗ್ರಹಿಸಿದ್ದೇನೆ. ಶೀಘ್ರ ವಿಸ್ತರಣೆಯ ನಿರೀಕ್ಷೆಯಲ್ಲಿದ್ದೇವೆ. -ಕ್ಯಾ| ಬ್ರಿಜೇಶ್‌ ಚೌಟ, ಸಂಸದರು

 

 

Continue Reading
Click to comment

Leave a Reply

Your email address will not be published. Required fields are marked *

Advertisement