ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

Published

on

ಈ ಭಾಗದ ಜನರಲ್ಲಿರುವ ಕಸ್ತೂರಿ ರಂಗನ್‌ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರಕಾರ ನಿವಾರಣೆ ಮಾಡಿದೆ. ಕಸ್ತೂರಿ ರಂಗನ್‌ ವರದಿಯನ್ನು ನಾವು ತಿರಸ್ಕರಿಸಿದ್ದೇವೆ. ಅರಣ್ಯದಂಚಿನಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಜನರೇ ಅರಣ್ಯವನ್ನು ರಕ್ಷಿಸುತ್ತಿದ್ದಾರೆ.
ಅರಣ್ಯ ರಕ್ಷಣೆಗೆ ನಮ್ಮಲ್ಲಿ ಹಲವು ಯೋಜನೆಗಳಿವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಜನರು ಪಶ್ಚಿಮ ಘಟ್ಟ ಸಂರಕ್ಷಣೆಗೂ ಆದ್ಯತೆ ನೀಡಬೇಕು ಎಂದರು.

ಜಂಟಿ ಸರ್ವೆಗೆ ಕಂದಾಯ, ಅರಣ್ಯ ಇಲಾಖೆ ಸಚಿವರು, ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಜಂಟಿ ಸುತ್ತೋಲೆ ಹೊರಡಿಸಿ, ಇಡೀ ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಜಂಟಿ ಸರ್ವೆ ನಡೆಸಲು ಸಮಿತಿ ರಚಿಸಲಾಗಿದೆ. ಅದರಂತೆ ಮುಂದಿನ ಆರು ತಿಂಗಳಲ್ಲಿ ಜಂಟಿ ಸರ್ವೆ ನಡೆಸಿ ವಾಸ್ತವದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದರು.

ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು ಗ್ರಾಮದ ಕಡಮಕಲ್ಲು- ಕೊಡಗಿನ ಗಾಳಿಬೀಡು ಸಂಪರ್ಕ ರಸ್ತೆ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಿ, ರಸ್ತೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು. ಕುಮಾರಪರ್ವತ ಚಾರಣಿಗರಿಗೆ ಸೌಲಭ್ಯ ನೀಡುವ ಬಗ್ಗೆ ಪರಿಶೀಲಿಸುತ್ತೇವೆ ಹಾಗೂ ಕಾಡಾನೆ ದಾಳಿ ನಿಯಂತ್ರಿಸಲು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

ಸಂಸದ ಸಾಗರ್‌ಖಂಡ್ರೆ, ಡಿಸಿಎಫ್‌ ಆಂತೋಣಿ ಮರಿಯಪ್ಪ, ಎಸಿಎಫ್‌ ಪ್ರವೀಣ್‌ ಕುಮಾರ್‌, ಆರ್‌ಎಫ್‌ಒಗಳಾದ ವಿಮಲ್‌ ಬಾಬು, ಮಂಜುನಾಥ್‌, ಸಂದ್ಯಾ, ದೇಗುಲದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತಿತರರು ಉಪಸ್ಥಿತರಿದ್ದರು.

 

 

ಈಶ್ವರ ಬಿ. ಖಂಡ್ರೆ ಧರ್ಮಸ್ಥಳ ಭೇಟಿ

ಬೆಳ್ತಂಗಡಿ: ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೋಮವಾರ ಕುಟುಂಬ ಸಹಿತ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಂದು ಸಾವಿರ ಕೆರೆಗಳ ಪುನಃಶ್ಚೇತನ ಹಾಗೂ ಸಂಸದರ ನಿಧಿಯಿಂದ ಬೀದರ್‌ ಜಿಲ್ಲೆಗೆ ಹೈನುಗಾರಿಕೆ ಅಭಿವೃದ್ಧಿಗೆ ಹೆಗ್ಗಡೆಯವರು ನೀಡಿದ ನೆರವಿನ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಡುಪ್ರಾಣಿಗಳು ಕೃಷಿಗೆ ಹಾನಿ ಮಾಡುವುದನ್ನು ತಡೆಯಲು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಹೆಗ್ಗಡೆಯವರು ಪ್ರಾರಂಭಿಸಿದ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಯೋಜನೆ ಬಗ್ಗೆಯೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ನಿ ಗೀತಾ ಖಂಡ್ರೆ, ಪುತ್ರ ಬೀದರ್‌ ಸಂಸದ ಸಾಗರ್‌ ಖಂಡ್ರೆ, ರಾಜ್ಯ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜತೆಗಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement