ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಜ.4: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ವಾರ್ಷಿಕ ಕಾರ್ಯಕ್ರಮ, ಶ್ರೀ ಸತ್ಯನಾರಾಯಣ ಪೂಜೆ – ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವ

Published

on

ತಾಲೂಕಿನಲ್ಲಿ ಸಾಧನೆಗೈದ ಮೂವರಿಗೆ ‘ಸಾಧನ ಪ್ರಶಸ್ತಿ’ ಟ್ರಸ್ಟ್‌ನ ದಶಮಾನೋತ್ಸವ ನನೆಪಿಗೆ ನೂತನ ಸಭಾಭವನ ಲೋಕಾರ್ಪಣೆ
ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ, ಗೌಡ ಯುವ ಸಂಘ, ಗೌಡ ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದರ* ಸಹಯೋಗದೊಂದಿಗೆ ಜ.4 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ನಡೆಯಲಿರುವುದು.

ಇದರೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಮತ್ತೂರು ಇದರ ದಶಮಾನೋತ್ಸವ ಸಂಭ್ರಮ ಕೂಡ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಸಾಧನೆ ಮಾಡಿದ ಹಿರಿಯ, ಯುವ ಮತ್ತು ಮಹಿಳಾ, ಹೀಗೆ ಆಯ್ದ ಮೂವರು ಸಾಧಕರಿಗೆ “ಸಾಧನ ಪ್ರಶಸ್ತಿ”ಯನ್ನು ನೀಡಲಾಗುವುದು. ಟ್ರಸ್ಟ್‌ನ ದಶಮಾನೋತ್ಸವ ನೆನೆಪಿಗೆ ನೂತನ ಸಭಾಭವನ ಲೋಕಾರ್ಪಣೆ ಮಾಡಲಾಗುವುದು ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮತ್ತು ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ರವಿ ಮುಂಗ್ಲಿಮನೆ ಅವರು ಮಾತನಾಡಿ, ಸುಮಾರು 10 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆಯನ್ನು ಬಲ ಪಡಿಸುವ ಮತ್ತು ಸಮಾಜದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದವರಿಗೆ ಸಹಕಾರ ನೀಡುವ ಹಿನ್ನಲೆಯಲ್ಲಿ ಗೌಡ ಯುವಸಂಘದಿಂದ ಪ್ರಯೋಜಿತವಾದ ಒಕ್ಕಲಿಗ ಸ್ವಸಹಾಯ ಟ್ರಸ್ಟ್, ಇದೀಗ ಪುತ್ತೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಾಗೂ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿಕೊಂಡಿದ್ದು, ಈವರೆಗೆ ಒಟ್ಟು 64 ಗ್ರಾಮಗಳಲ್ಲಿ 66 ಒಕ್ಕೂಟ ಮತ್ತು 1050 ಗುಂಪುಗಳ ರಚನೆಯಾಗಿದ್ದು ಆ ಮೂಲಕ 10,000ಕ್ಕೂ ಮಿಕ್ಕಿ ಸದಸ್ಯರಿರುತ್ತಾರೆ. ಇದೀಗ ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಒಕ್ಕೂಟಗಳಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸಮಾಜದ ದಂಪತಿಗಳನ್ನು ಆಯಾ ಗ್ರಾಮಗಳಲ್ಲಿ ಗುರತಿಸಿ ಗೌರವಿಸಲಾಗುವುದು. ಪುತ್ತೂರು ಖಾಸಗಿ ಬಸ್‌ ನಿಲ್ದಾಣದ ಎದುರುಗಡೆ ಟ್ರಸ್ಟ್ ಸ್ವಂತ ಕಟ್ಟಡ ಹೊಂದಿದ್ದು, ದಶಮಾನೋತ್ಸವದ ನೆನಪಿಗೆ ನೂತನ ಸಭಾಭವನ ಕೂಡ ಅದೇ ಕಟ್ಟಡದಲ್ಲಿ ನಿರ್ಮಾಣಗೊಂಡಿದ್ದು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಒಟ್ಟು ದಶಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ವಾರ್ಷಿಕ ಸಮಾವೇಶದ ಜೊತೆಗೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಡೆಯಲಿದೆ ಎಂದವರು ಹೇಳಿದರು.

ಕಾರ್ಯಕ್ರಮದ ವಿವರ:
ಅಂದು ಪೂರ್ವಾಹ್ನ ಗಂಟೆ 6.00 ರಿಂದ ಗಣಪತಿ ಹವನ, ಗಂಟೆ 8.00 ರಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು ಗಂಟೆ 8-30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಗಂಟೆ 10.00 ರಿಂದ ಸಭಾ ಕಾರ್ಯಕ್ರಮ ಹಾಗೂ ನಂತರ ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಆರ್ಶಿವ್ರಚನ ಮಾಡಲಿದ್ದಾರೆ. ಈ ಕಾರ್ಯಕ್ರಮವು ಶಾಖಾ ಮಠದ ಪರಮಪೂಜ್ಯ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವ ಡಿ ವಿ ಸದಾನಂದ ಗೌಡ, ಮಾಜಿ ಸಂಸದಡಿ ಕೆ ಸುರೇಶ್, ರಾಜ್ಯ ಯುವ ಜಾತ್ಯಾತೀತ ಜನತಾದಳದ ಅಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ, ರಾಜ್ಯ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟ ಅಧ್ಯಕ್ಷ ಡಾ| ಶಾಂತ ಸುರೇಂದ್ರ ಗೌಡ, ಮಡಿಕೇರಿ ಶಾಸಕ ಮಂಥರ್ ಗೌಡ, ನ್ಯಾಯಾವಾದಿ ಮೋಹನ ಗೌಡ ಇಡ್ಯಡ್ಕ ಮುಂತಾದವರು ಭಾಗವಹಿಸಲಿದ್ದಾರೆ. ಮಂಗಳೂರು ತಾಲೂಕು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ಲೋಕಯ್ಯ ಗೌಡ, ಬೆಳ್ತಂಗಡಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು,
ಬಂಟ್ವಾಳ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸಿ ಕುಶಾಲಪ್ಪ ಗೌಡ ಇರಂದೂರು, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ ಎಸ್ ಗಂಗಾಧರ ಗೌಡ ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ಚಲನ ಚಿತ್ರ ನಟರು ಮತ್ತು ಧಾರವಾಹಿ ಕಲಾವಿದರು ಭಾಗವಹಿಸಲಿದ್ದಾರೆ.
ಸುಮಾರು 6000ಕ್ಕೂ ಮಿಕ್ಕಿ ಸಮಾಜ ಭಾಂದವರು ಸೇರುವ ನೀರಿಕ್ಷೆಯಲ್ಲಿ ಇದ್ದು, ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಕೂಡಾ ನಡೆಯಲಿದೆ ಎಂದು ರವಿ ಮುಂಗ್ಲಿಮನೆ ಹೇಳಿದರು.
ಟ್ರಸ್ಟ್‌ ವತಿಯಿಂದ ಇಬ್ಬರಿಗೆ ಸನ್ಮಾನ:
ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ವತಿಯಿಂದ ಇಬ್ಬರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಟ್ರಸ್ಟ್‌ನ ಸ್ಥಾಪನೆಯಿಂದಲೂ ಪೂರ್ಣಮಟ್ಟದಲ್ಲಿ ಟ್ರಸ್ಟ್‌ನ ಎಲ್ಲಾ ಕಾರ್ಯಚಟುವಟಿಕೆ ನಡೆಸುತ್ತಿರುವ ವೆಂಕಪ್ಪ ಗೌಡ ಕೆಯ್ಯರು, ಟ್ರಸ್ಟ್‌ನ ದ್ವೇಯ ಗೀತೆ ರಚನೆ ಮಾಡಿದ ನಿವೃತ್ತ ಕೃಷಿ ಅಧಿಕಾರಿ ಪದ್ಮಯ್ಯ ಗೌಡ ಬನ್ನೂರು ಅವರನ್ನು ಸನ್ಮಾನಿಸಲಿದ್ದೇವೆ ಎಂದು ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಡಿ.ವಿ ಅವರು ಹೇಳಿದರು.

 

 

ಸ್ಮರಣ ಸಂಚಿಕೆ ಬಿಡುಗಡೆ:
ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ರಚನೆ
ಮಾಡುತ್ತಿದ್ದೇವೆ. ಅದನ್ನು ಸಾಂಕೇತಿಕವಾಗಿ ಅಂದು ಬಿಡುಗಡೆ ಮಾಡಲಿದ್ದೇವೆ. ಸಂಘದ ಸಭಾಭವನ್ನು ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ದಶಮಾನೋತ್ಸವ ಸಮಿತಿ ಅಧ್ಯಕ್ಷ ಚಾರ್ವಾಕ ಗೋಪಾಲಕೃಷ್ಣ ಪಟೇಲ್ ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಕುಲಾಲ್‌, ಪ್ರಧಾನ ಕಾರ್ಯದರ್ಶಿ ದಯಾನದ ಕೆ.ಎಸ್, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧ‌ರ್ ಕಣಜಾಲು ಉಪಸ್ಥಿತರಿದ್ದರು.
ಮೂವರಿಗೆ ಸಾಧನ ಪ್ರಶಸ್ತಿ:
ಪ್ರತಿ ವರ್ಷದಂತೆ ಹಿರಿಯ, ಯುವ, ಮಹಿಳಾ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಸಾಧನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದ್ದಂತೆ ಈ ಭಾರಿಯ ಪ್ರಶಸ್ತಿಗೆ ಅಂಕಲ್ ಸ್ವೀಟ್ಸ್‌ನ ಮಾಲಕ ಕುಶಾಲಪ್ಪ ಗೌಡ, ಯುವ ಸಂಘದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟು ಕೀರ್ತಿ, ಮಹಿಳಾ ಸಂಘದಲ್ಲಿ ನಿವೃತ್ತ ಉಪನ್ಯಾಸಕಿ ವಸಂತಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಮಾಜದಲ್ಲಿ ತೊಡಗಿಸಿಕೊಂಡು ಸಾಧನೆಯನ್ನು ಮಾಡಿದ ವ್ಯಕ್ತಿಗಳನ್ನು ಪ್ರತೀ ವರ್ಷ ಗುರುತಿಸಿ ಗೌರವಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಆರು ತಾಲೂಕುಗಳ ಸಂಘದ ಅಧ್ಯಕ್ಷರುಗಳು ಈ ಸಮಾರಂಭದಲ್ಲಿ ಗೌರವ ಉಪಸ್ಥಿತಿಯಲ್ಲಿ ಇರುತ್ತಾರೆ ಎಂದು ತಾಲೂಕು ಸಮಿತಿ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಹೇಳಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement