Published
1 day agoon
By
Akkare Newsದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸೆನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯು ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದೆ. ಇದರಿಂದ ಜಿಲ್ಲೆಯ ಗ್ರಾಮಾಂತರ ಭಾಗದ ಜನತೆಗೆ ಸೈಬರ್ ಕ್ರೈಂ ಗೆ ಸಂಬಂಧ ಪಟ್ಟ ಪ್ರಕರಣಗಳ ಬಗ್ಗೆ ದೂರು ನೀಡಲು ಅನುಕೂಲವಾಗಲಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಳೆಯ ಕಟ್ಟಡವನ್ನು ನವೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರದೇಶದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ನಡೆದರೂ ಸಂತ್ರಸ್ತರು ದೂರು ನೀಡುವುದಕ್ಕೆ ಮಂಗಳೂರಿಗೆ ತೆರಳಬೇಕು. ಇದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಅನಾನುಕೂಲವಾಗುತ್ತಿತ್ತು.
ದ.ಕ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ದೂರು ನೀಡಲು ಮಂಗಳೂರಿಗೆ ತೆರಳಬೇಕು ಎನ್ನುವ ಕಾರಣದಿಂದ ಸಣ್ಣ ಪ್ರಕರಣಗಳಾದರೆ ದೂರು ನೀಡುವುದಕ್ಕೇ ಹೋಗುತ್ತಿರಲಿಲ್ಲ. ಆದರೆ ಇನ್ನು ಠಾಣೆಯು ಹತ್ತಿರದಲ್ಲಿದೆ ಎಂದು ಹೆಚ್ಚಿನ ಮಂದಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿ ದೂರು ನೀಡುವ ಸಾಧ್ಯತೆ ಹೆಚ್ಚಿದೆ.
ಮಂಗಳೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಸೆನ್ ಠಾಣೆಯು ಕಾರ್ಯಾಚರಿಸುತ್ತಿದ್ದು, ಜನರ ಅನುಕೂಲದ ಜತೆಗೆ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಬಿ.ಸಿ. ರೋಡಿನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಇಲಾಖೆ ಚಿಂತಿಸಿದೆ. ಬಂಟ್ವಾಳದಲ್ಲಿ ನವೀಕರಣಗೊಳ್ಳುತ್ತಿರುವ ಕಟ್ಟಡವನ್ನು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಪರಿಶೀಲಿಸಿ ನಿರ್ಮಾಣಕ್ಕೆ ಸಂಬಂಧಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.