Published
3 months agoon
By
Akkare Newsಜ.21): ಬ್ರಾಹ್ಮಣರು ಕಾಂಗ್ರೆಸ್ ಪಕ್ಷವನ್ನು ದೂರ ಮಾಡಬಾರದು. ನಾವು ಮೊದಲಿನಿಂದಲೂ ನಿಮ್ಮ ಜೊತೆ ಇದ್ದೇವೆ. ಬ್ರಾಹ್ಮಣರ ಬೇಡಿಕೆಗಳನ್ನು ಸರ್ಕಾರದಿಂದ ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬ್ರಾಹ್ಮಣ ಮಹಾಸಮ್ಮೇಳನದ 2ನೇ ದಿನವಾದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ ತಂದೆ ಆರ್.ಗುಂಡೂರಾವ್ ಕೂಡ ಬ್ರಾಹ್ಮಣ ಸಮುದಾಯದ ಜೊತೆ ಇರುತ್ತೇನೆ ಎಂದು ಹೇಳಿದ್ದರು.
ಬ್ರಾಹ್ಮಣರಿಗೆ ಅನೇಕ ಅನುಕೂಲಗಳನ್ನು ಮಾಡಿಕೊಡಲಾಗಿದೆ.
ಬ್ರಾಹ್ಮಣರ ನಿಗಮಕ್ಕೆ ಕಳೆದೆರೆಡು ವರ್ಷಗಳಲ್ಲಿ ತಲಾ ₹10 ಕೋಟಿ ಕೊಟ್ಟಿದ್ದೇವೆ. ಅದರ ಹಿಂದಿನ ಸರ್ಕಾರ ಎಷ್ಟು ಕೊಟ್ಟಿದೆ ಎಂದು ತೆಗೆದು ನೋಡಲಿ ಎಂದರು. ಇದೇ ವೇಳೆ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದ ಅವರು, ಅದು ಸಾವಿರಾರು ವರ್ಷಗಳಿಂದ ಇದೆ. ಮುಂದೆಯೂ ಇರುತ್ತದೆ ಎಂದು ನುಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲ ಬಹಳ ಮುಖ್ಯವಾಗುತ್ತದೆ. ಸಮಸ್ಯೆಗಳು, ವಿಷಯಗಳನ್ನು ಸರ್ಕಾರದ ಮಟ್ಟದಲ್ಲಿ ಸರಿಯಾಗಿ ತಲುಪಿಸಲು ಸಂಘಟನೆ ಅನಿವಾರ್ಯ. ಈ ವ್ಯವಸ್ಥೆಯಲ್ಲಿ ನಾವು ಎಷ್ಟೇ ಜಾತ್ಯತೀತ ಎಂದರೂ ಜಾತಿ ಬಂದೇ ಬರುತ್ತದೆ. ಎಲ್ಲರೂ ಅವರವರ ಜಾತಿ ಸಂಘಟನೆ ಮಾಡುತ್ತಾರೆ.
ತಮ್ಮವರನ್ನು ಮೇಲೆ ತರಬೇಕು ಎಂದು ಪ್ರಯತ್ನಿಸುತ್ತಾರೆ. ಹೀಗಾಗಿ ಬ್ರಾಹ್ಮಣರೂ ಸಂಕೋಚ ಇಲ್ಲದೆ ಮುಂದೆ ಸಾಗಬೇಕು. ಬ್ರಾಹ್ಮಣರಿಗೆ ಅವಕಾಶಗಳು ಸಿಗುತ್ತಿಲ್ಲ, ಹಿಂದೆ ಹೋಗುತ್ತಿದ್ದಾರೆ, ಅಗತ್ಯ ನೆರವು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ ಎಂದು ಸಚಿವ ಗುಂಡೂರಾವ್ ಹೇಳಿದರು. ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲೂ ಇಡಬ್ಲ್ಯುಎಸ್ ವರ್ಗಗಳ ಶೇ.10ರಷ್ಟು ಮೀಸಲಾತಿ ಅನುಷ್ಠಾನ ಆಗಿಲ್ಲ. ಅನುಷ್ಠಾನ ವಿಚಾರದಲ್ಲಿ ಕೆಲ ಸಮಸ್ಯೆಗಳು ಇವೆ. ಬಿಜೆಪಿ ಅವಧಿಯಲ್ಲೂ ಅದನ್ನು ಅನುಷ್ಠಾನ ಮಾಡಿಲ್ಲ ಎಂದು ಗುಂಡೂರಾವ್ ತಿಳಿಸಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಬ್ರಾಹ್ಮಣರ ಆಶೀರ್ವಾದದಿಂದ ನಾನು ಪದ್ಮನಾಭನಗರದಿಂದ ಗೆದ್ದು ಬಂದಿದ್ದೇನೆ. ಹಿಂದೂ ಸಮಾಜ ಉಳಿಯಲು ಬ್ರಾಹ್ಮಣರ ಕೊಡುಗೆ ಬಹಳ ದೊಡ್ಡದು.
ಬಿಜೆಪಿಗರಿಂದ ಬೆಂಕಿ ಹಚ್ಚುವ ಕೆಲಸ: ಸಚಿವ ದಿನೇಶ್ ಗುಂಡೂರಾವ್
ನೆರೆಯ ಬಾಂಗ್ಲಾದೇಶ ಸೇರಿ ವಿವಿಧೆಡೆ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದಾಗ ಹಿಂದೂಗಳು ಎಚ್ಚರದಿಂದ ಇರುವುದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ಎಂದು ಹೇಳಿದರು. ಸಚಿವ ಭೈರತಿ ಸುರೇಶ್ ಮಾತನಾಡಿ, ಬ್ರಾಹ್ಮಣ ಸಮಾಜದಿಂದ ₹50 ಕೋಟಿ ಅನುದಾನ ಕೋರಲಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಸಂಸದರಾದ ಡಾ। ಸಿ.ಎನ್.ಮಂಜುನಾಥ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್.ವಿ.ದೇಶಪಾಂಡೆ, ರಾಮಮೂರ್ತಿ, ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಉಪಸ್ಥಿತರಿದ್ದರು.