Published
2 months agoon
By
Akkare Newsಬೆಂಗಳೂರು::ಜನವರಿ26: ಬಿಜೆಪಿ ಪಾಳಯದಲ್ಲಿ ಬಣ ಬಡಿದಾಟ ಜೋರಾಗಿದೆ. ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ್ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ನಡುವೆ ಬಿರುಕು ಮೂಡಿದ್ದು, ಈ ನಡುವೆ ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಗುಸು ಗುಸು ಶುರುವಾಗಿದೆ.
ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಶ್ರೀರಾಮುಲುಗೆ ಕಾಂಗ್ರೆಸ್ ಪಕ್ಷ ಸೇರುವಂತೆ ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದ್ದು ನಿಜ. ಆದರೆ, ಈಗ ನಾನು ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಇಂತಹ ಆರೋಪ ಮಾಡುತ್ತಿದ್ದಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಆ ರೀತಿ ಆಗ ಸುಮಾರು 50 ಜನಕ್ಕೆ ಕೇಳಿದ್ದೇನೆ. ಆದರೆ, ಈಗ ನನಗೆ ಶ್ರೀರಾಮುಲು ಸಿಕ್ಕಿಯೂ ಇಲ್ಲ, ನನ್ನ ಬಳಿ ಮಾತನಾಡಿಯೂ ಇಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ನಾನು ಆಹ್ವಾನವನ್ನೂ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಈ ರೀತಿ ಮಾತನಾಡುತ್ತಿದ್ದಾನೆ ಎಂದರು. ನಾನು ಶ್ರೀರಾಮುಲು ಸಂಪರ್ಕದಲ್ಲಿರುವುದನ್ನು ಆತ ನೋಡಿದ್ದಾನೆಯೇ? ಆತ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ ಎಂದರು.
ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೇವೆ. ಗಾಂಧೀಜಿ ಅವರ ತತ್ವ, ಆದರ್ಶ, ನಾಯಕತ್ವ, ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು.
Union Budget 2025: ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿ: ನಿರ್ಮಲಾ ಸೀತಾರಾಮನ್‌ಗೆ ಡಿ.ಕೆ. ಶಿವಕುಮಾರ್ ಪತ್ರ
ಸಾಮಾಜಿಕ ನ್ಯಾಯ, ಸಮಾನತೆಗಾಗಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದಾರೆ. ಸಂವಿಧಾನದ ಅಗತ್ಯತೆ ಬಗ್ಗೆ ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಂವಿಧಾನವನ್ನು ಶ್ರೇಷ್ಠ ಎಂದು ಮಾದರಿಯಾಗಿ ಪರಿಗಣಿಸಿವೆ. ಸಂವಿಧಾನದ ಆರ್ಟಿಕಲ್ 14 ಮತ್ತು 18 ಸಮಾನತೆ ಬಗ್ಗೆ ಹೇಳುತ್ತದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳುತ್ತದೆ. ಇದು ಕೇವಲ ಪುಸ್ತಕವಲ್ಲ. ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಗೌರವ, ಸಮಾಜದ ಗೌರವ ಹಾಗೂ ದೇಶದ ಗೌರವ ಕಾಪಾಡಿಕೊಂಡು ಹೋಗಬೇಕು ಎಂಬುದನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತಿಳಿಸಿದ್ದಾರೆ.
ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯದ ಜತೆಗೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಕೊಡುಗೆಯಾಗಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಖರ್ಗೆ ಅವರು ಹೇಳಿದಂತೆ ಈ ಸಂವಿಧಾನ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಸಂವಿಧಾನಕ್ಕೆ ಆಗುತ್ತಿರುವ ಅಪಮಾನದ ವಿರುದ್ಧ ಹೋರಾಟ ಮಾಡಬೇಕು. ಇದಕ್ಕಾಗಿಯೇ ನಾವು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೇವೆ.
ಎಐಸಿಸಿಯ ಈ ಕಾರ್ಯಕ್ರಮವನ್ನು ಇಡೀ ವರ್ಷ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಬೇಕು ಎಂದು ನಮ್ಮ ಅಧ್ಯಕ್ಷರಲ್ಲಿ ನಾನು ಮನವಿ ಮಾಡಿದ್ದೆ. ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಸಮಾಜದ ಎಲ್ಲಾ ವರ್ಗಗಳ ಕಾರ್ಯಕ್ರಮ. ಹೀಗಾಗಿ ಇದು ಸರ್ಕಾರದ ಕಾರ್ಯಕ್ರಮವಾಗಬೇಕು ಎಂದು ಪಕ್ಷದವತಿಯಿಂದ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಆಮೂಲಕ ಬಾಪು ಅವರ ತತ್ವ, ಅಂಬೇಡ್ಕರ್ ಅವರ ಮೌಲ್ಯಗಳು, ನಮ್ಮ ಸಂವಿಧಾನ ಕಾಪಾಡುವ ಕೆಲಸ ಮಾಡಬೇಕು. ಇವುಗಳ ಬಗ್ಗೆ ಶಾಲಾ ಕಾಲೇಜು ಮಟ್ಟದಲ್ಲಿ ವ್ಯಾಪಕ ಚರ್ಚೆಯಾಗಬೇಕು.