Published
2 months agoon
By
Akkare Newsಮೈಕ್ರೋ ಫೈನಾನ್ಸ್ ಹಾವಳಿಯಿಂದ ರಾಜ್ಯದಲ್ಲಿ ಆತ್ಮಹತ್ಯೆ ಹಾಗೂ ಕುಟುಂಬಗಳು ಊರು ತೊರೆಯುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಅವುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಹೊಸದಾಗಿ ಮಸೂದೆ ತರಲು ಒಪ್ಪಿಗೆ ಪಡೆಯಲಾಗಿದೆ. ಕಿರುಕುಳ ತಡೆಗೆ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯಪಾಲರ ಬಳಿ ಅಂಕಿತ ಪಡೆಯಲು ಸಂಪುಟ ಸಭೆ ಇಂದು ನಿರ್ಧರಿಸಿದೆ.
ಕೆಲವು ಪ್ರಮುಖ ಅಂಶಗಳನ್ನು ಮಸೂದೆಯಲ್ಲಿ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ, ಮೈಕ್ರೋ ಫೈನಾನ್ಸ್ ವಿಚಾರವಾಗಿ ಸುಗ್ರೀವಾಜ್ಞೆಗೆ ಸಂಬಂಧಿಸಿ ಮತ್ತೊಂದು ಹಂತದ ಸಭೆ ನಡೆಯಲಿದೆ. ನಿರ್ಣಯ ಕೈಗೊಳ್ಳುವ ಪರಮಾಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಗಳಿಗೆ ನೀಡಿದೆ.
“ಖಾಸಗಿ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕುವ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಅಮಾನವೀಯವಾಗಿ ಮೈಕ್ರೋ ಪೈನಾನ್ಸ್ನಿಂದ ಸಾಲ ವಸೂಲಿ ಆಗುತ್ತಿದೆ. ಇಂದು ಕೂಡ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಮಸೂದೆ ತರಲು ತೀರ್ಮಾನಿಸಿ ಕೆಲವು ತಾಂತ್ರಿಕ ಅಂಶ ಚರ್ಚಿಸಿದ್ದೇವೆ. ಇಂದು ಸಂಜೆ ಮುಖ್ಯಮಂತ್ರಿಗಳು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಕೆಲವು ಮಹತ್ವದ ವಿಚಾರ ಇರುವುದರಿಂದ ಸಭೆ ಮಾಡುತ್ತಿದ್ದೇವೆ. ಆಗ ಮಸೂದೆಗೆ ಸ್ಪಷ್ಟ ಚಿತ್ರಣ ನೀಡುತ್ತೇವೆ” ಎಂದು ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಎಚ್ಕೆ ಪಾಟೀಲ್ ತಿಳಿಸಿದರು.
“ನಮ್ಮಲ್ಲಿರುವ ಕಾನೂನುಗಳು ಕೆಲವು ಪ್ಲಸ್ ಆಗಲಿವೆ; ಕೆಲವು ಮೈನಸ್ ಆಗಲಿವೆ. ಆದ್ದರಿಂದ, ಕಾನೂನಾತ್ಮಕ ತೀರ್ಮಾನಕ್ಕೆ ಸಂಜೆ ಹಿರಿಯ ಸಚಿವರ ಸಭೆ ಕರೆಯಲಾಗಿದೆ. ಸುಗ್ರೀವಾಜ್ಞೆ ತರಲು ಸಿಎಂಗೆ ಸಚಿವ ಸಂಪುಟ ಅಧಿಕಾರವನ್ನು ನೀಡಿದೆ. ಸಿಎಂ ಜೊತೆ ಸಭೆಯ ಬಳಿಕ ಕಾನೂನಾತ್ಮಕವಾಗಿ ತಿರ್ಮಾನ ಆಗಲಿದೆ” ಎಂದು ಅವರು ಹೇಳಿದರು.