Published
1 month agoon
By
Akkare Newsಮನೆಯ ಪಕ್ಕದಲ್ಲಿರುವ ರೈಲ್ವೆ ಹಳಿ ಬಳಿ ಆತನ ಪಾದರಕ್ಷೆಗಳು ಹಾಗೂ ಮೊಬೈಲ್ ಪತ್ತೆ.
ಸರಿ ಸುಮಾರು ಮೂರು ದಿನದಿಂದ ನಾಪತ್ತೆಯಾಗಿರುವ ಕಪಿತಾನಿಯೋ ಕಾಲೇಜಿನ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಫರಂಗಿಪೇಟೆಯ ಪ್ರದೇಶದ ವಿದ್ಯಾರ್ಥಿಯ ಕುರಿತು ಯಾವುದೇ ಸುಳಿವು ಸಿಗದಿದ್ದರೂ ಸಾಕಷ್ಟು ಜಟಿಲವಾಗಿರುವ ಜತೆಗೆ ಅನುಮಾನಗಳನ್ನೂ ಸೃಷ್ಟಿಸಿದೆ. ಪೊಲೀಸರು ಆತನ ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದು, ಗುರುವಾರ ಬೆಳಗ್ಗೆ ಸ್ಥಳೀಯ ಮುಖಂಡರು ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆಸಿ ಪ್ರಕರಣವನ್ನು ಶೀಘ್ರ ಭೇದಿಸಿ ವಿದ್ಯಾರ್ಥಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿದರು. ಫೆ. 25ರಂದು ಸಂಜೆ 7:00ರ ಸುಮಾರಿಗೆ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಮನೆಗೆ ಬಂದಿಲ್ಲ. ಮನೆಯ ಪಕ್ಕದಲ್ಲಿರುವ ರೈಲು ಹಳಿ ಬಳಿ ಆತನ ಪಾದರಕ್ಷೆಗಳು ಹಾಗೂ ಮೊಬೈಲ್ ಪತ್ತೆಯಾಗಿದ್ದವು.
ಆತ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಾ. 3ರಿಂದ ಆತನಿಗೆ ಅಂತಿಮ ಪರೀಕ್ಷೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಫೆ. 25ರಂದು ಕಾಲೇಜಿಗೆ ಹೋಗಿ ಹಾಲ್ ಟಿಕೆಟ್ ಪಡೆದುಕೊಂಡು ಮನೆಗೆ ಬಂದಿದ್ದ. ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಾಪತ್ತೆಯಾಗಿರುವ ಬಾಲಕನ ಮೊಬೈಲ್, ಪುಸ್ತಕಗಳಲ್ಲಿ ಹುಡುಕಾಟ ನಡೆಸಿ ಯಾವುದಾದರೂ ಸುಳಿವು ಸಿಗುತ್ತದೆಯೇ ಎಂದು ನೋಡಿದ್ದಾರೆ. ಜತೆಗೆ ಮನೆಯವರ ವಿಚಾರಣೆಯೂ ನಡೆದಿದ್ದು, ಮನೆ ಸುತ್ತಮುತ್ತಲಿನ ಕೆಲವರ ವಿಚಾರಣೆಯನ್ನೂ ಮಾಡಲಾಗಿದೆ. ಆತ ಓದುತ್ತಿದ್ದ ಕಾಲೇಜಿಗೂ ಪೊಲೀಸ್ ತಂಡ ಭೇಟಿ ನೀಡಿ ತನಿಖೆ ಮಾಡಿದ್ದಾರೆ.
ಬಾಲಕನ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಫರಂಗಿಪೇಟೆ ಸುತ್ತಮುತ್ತಲ ಗ್ರಾಮಗಳ ಪ್ರಮುಖರು, ವಿವಿಧ ಸಂಘಟನೆಗಳ ಮುಂದಾಳುಗಳು ಫರಂಗಿಪೇಟೆ ಹೊರಠಾಣೆಯ ಮುಂಭಾಗ ಜಮಾಯಿಸಿ ಆತನನ್ನು ಪತ್ತೆ ಮಾಡುವಂತೆ ಆಗ್ರಹಿಸಿದರು. 24 ಗಂಟೆಯ ಒಳಗಾಗಿ ಆತನ ಪತ್ತೆಯಾಗದಿದ್ದಲ್ಲಿ ಮಾ. 1ರಂದು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದು, ಈ ವೇಳೆ ಫರಂಗಿಪೇಟೆ ಬಂದ್ ಮಾಡುವ ಆಗ್ರಹವೂ ಕೇಳಿ ಬಂತು. ಫರಂಗಿಪೇಟೆಯ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ಸೇರಿ ಮಾ. 1ರಂದು ಪ್ರತಿಭಟನೆಯ ಜತೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ತೀರ್ಮಾನ ಕೈಗೊಂಡರು.