Published
3 weeks agoon
By
Akkare Newsಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಬಾಕಿ ಸೇರಿ 15 ಕೆಜಿ ಅಕ್ಕಿ ಪ್ರತಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ.
ಹೌದು, ಫೆಬ್ರವರಿ ತಿಂಗಳಲ್ಲಿ ಬಾಕಿಯಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಸೇರಿಸಿ ಈ ತಿಂಗಳು 15 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಹಣವನ್ನು ವರ್ಗಾಹಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರುವರಿ-2025ರ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯನ್ನು ಸಾರ್ವಜನಿಕರ ವಿತರಣಾ ಪದ್ಧತಿಯಲ್ಲಿ ವಿತರಿಸಲು ಸರ್ಕಾರವು ಆದೇಶಿಸಿರುತ್ತದೆ.
ಅದರಂತೆ ಪಡಿತರ ಚೀಟಿಯಲ್ಲಿನ ಫಲಾನುಭವಿಗಳಿಗೆ ಮಾರ್ಚ್-2025ರ ಮಾಹೆಗೆ ಫೆಬ್ರುವರಿ-2025ರ 5 ಕೆ.ಜಿ ಅಕ್ಕಿ ಸೇರಿಸಿ, ಹಂಚಿಕೆ ಮಾಡಲಾದ ಪಡಿತರ ಪ್ರಮಾಣದಂತೆ ಅದ್ಯತಾ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 15 ಕೆ.ಜಿ ಅಕ್ಕಿ, ಮೂರು ಸದಸ್ಯರಿಗಿಂತ ಕಡಿಮೆ ಸದಸ್ಯರನ್ನು ಹೊಂದಿರುವ ಅಂತ್ಯೋದಯ ಪಡಿತರ ಚೀಟಿಗೆ 35ಕೆ.ಜಿ ಅಕ್ಕಿ, ನಾಲ್ಕು ಸದಸ್ಯರಿಗಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಅಂತ್ಯೋದಯ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿಯೊಂದಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಟಣೆ ತಿಳಿಸಿದೆ.