Published
13 hours agoon
By
Akkare Newsರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಅವರ ಬಿಡದಿಯ ನಿವಾಸದ ಮುಂದೆಯೇ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿ 12:50ರ ಸುಮಾರಿಗೆ ದುಷ್ಕರ್ಮಿಗಳು ಫೈರಿಂಗ್ ಮಾಡಿರುವ ಘಟನೆ ನಡೆದಿದೆ. ರಿಕ್ಕಿ ರೈ ಅವರನ್ನು ಗುರಿಯಾಗಿಸಿಕೊಂಡು ಎರಡು ಸುತ್ತಿನ ಗುಂಡಿನ ದಾಳಿ ಮಾಡಲಾಗಿದೆ.
ತಡರಾತ್ರಿ ರಿಕ್ಕಿ ರೈ ತಮ್ಮ ಕಾರ್ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಘಟನೆ ಕುರಿತು ಮಾತನಾಡಿದ ರಾಮನಗರ ಎಸ್.ಪಿ ಶ್ರೀನಿವಾಸಗೌಡ ಅವರು, ಮಧ್ಯರಾತ್ರಿ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಘಟನೆ ಆಗಿದೆ. ಅವರ ಜೊತೆ ಟ್ರಾವೆಲ್ ಮಾಡ್ತಿದ್ದ ಒಬ್ಬರಿಗೆ ಸಣ್ಣ ಪುಟ್ಟ ಗಾಯ ಆಗಿದೆ. ರಿಕ್ಕಿ ರೈಗೆ ತೀವ್ರ ಗಾಯಗಳಾಗಿವೆ. ಇನ್ನು ಅವರನ್ನು ವಿಚಾರಿಸಿ ಮಾಹಿತಿ ಕಲೆ ಹಾಕಬೇಕಾಗಿದೆ. ಮೇಲ್ನೊಟಕ್ಕೆ ಒಂದು ಸುತ್ತು ಫೈರ್ ಆಗಿರುವ ಶಂಕೆ ಇದೆ. FSL ವರದಿ ಬಳಿಕ ಇನ್ನಷ್ಟು ಮಾಹಿತಿ ಗೊತ್ತಾಗುತ್ತದೆ ಎಂದು ತಿಳಿಸಿದರು.