Published
7 hours agoon
By
Akkare Newsರಾಮನಗರ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಶುಕ್ರವಾರ ತಡರಾತ್ರಿ ಗುಂಡಿನ ದಾಳಿ ಮಾಡಿದ್ದರು.
ಬಿಡದಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಮಂದಿಯ ಮೇಲೆ ಸಂದೇಹ ವ್ಯಕ್ತಪಡಿಸಿ ರಿಕ್ಕಿ ರೈ ಚಾಲಕ ಬಸವರಾಜು ದೂರು ನೀಡಿದ್ದಾರೆ.
ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ಮುತ್ತಪ್ಪ ರೈ ಮಾಜಿ ಸಹಚರ ರಾಕೇಶ್ ಮಲ್ಲಿ, ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ್ ವಿರುದ್ದ ಎಫ್ ಐಆರ್ ದಾಖಲಾಗಿದೆ.
ಆಸ್ತಿ ವಿವಾದ, ಭೂಗತ ಲೋಕದ ಕೃತ್ಯ, ರಿಯಲ್ ಎಸ್ಟೇಟ್ ಮಾಫಿಯಾ ಕೃತ್ಯದ ಶಂಕೆ ಹೀಗೆ ಹಲವು ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂದೆ ಕುಳಿತು ಬಚಾವಾದ ರಿಕ್ಕಿ
ರಷ್ಯಾದಲ್ಲಿ ನೆಲೆಸಿರುವ ರಿಕ್ಕಿ ರೈ ಎರಡು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದರು. ಬಿಡದಿಯ ಮನೆಯಿಂದ ಕಾರಿನಲ್ಲಿ ಹೊರಟ ಸ್ವಲ್ಪ ಸಮಯದಲ್ಲೇ ಈ ಘಟನೆ ನಡೆದಿದೆ.
ಪ್ರತಿಬಾರಿ ತಾನೇ ಕಾರು ಚಾಲನೆ ಮಾಡುತ್ತಿದ್ದ ರಿಕ್ಕಿ ರೈ ಶುಕ್ರವಾರ ರಾತ್ರಿ ತಮ್ಮ ಚಾಲಕನಿಗೆ ಡ್ರೈವ್ ಮಾಡಲು ಹೇಳಿ ಹಿಂದಿನ ಸೀಟ್ ನಲ್ಲಿ ತಮ್ಮ ಗನ್ ಮ್ಯಾನ್ ಜೊತೆ ಕುಳಿತಿದ್ದರು. ಫೈರಿಂಗ್ ಆಗುತ್ತಿದ್ದಂತೆ ಕಾರು ಚಾಲಕ ಬಗ್ಗಿದ್ದು ಗುಂಡೇಟಿನಿಂದ ಪಾರಾಗಿದ್ದಾನೆ. ರಿಕ್ಕಿರೈ ಚಾಲನೆ ಮಾಡುತ್ತಾರೆ ಎಂದು ಗುರಿಯಾಗಿಸಿಕೊಂಡು ಫೈರಿಂಗ್ ಮಾಡಲಾಗಿತ್ತು.
ರೈ ಮನೆಯ ರಸ್ತೆಯಲ್ಲಿದ್ದ ಕಂಪೌಂಡ್ ಮರೆಯಿಂದ ಗುಂಡಿನ ದಾಳಿ ನಡೆಸಿದ್ದು, 70 ಎಂಎಂ ಬುಲೆಟ್ ನ ಶಾಟ್ ಗನ್ ಬಳಸಿ ಫೈರಿಂಗ್ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ರಿಕ್ಕಿ ರೈ ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.