Connect with us

ಇಂದಿನ ಕಾರ್ಯಕ್ರಮ

ಪುತ್ತೂರಿನ ನರಿಮೊಗರು ಬಿಂದು ಸಂಸ್ಥೆಯ‌ ಮಾಲಕರಾದ ಸತ್ಯಶಂಕರ್ ಅವರ 60 ನೇ ಹುಟ್ಟು ಹಬ್ಬ ಆಚರಣೆ

Published

on

ಪುತ್ತೂರಿನ ನರಿಮೊಗರು ಬಿಂದು ಸಂಸ್ಥೆಯ‌ ಮಾಲಕರಾದ ಸತ್ಯಶಂಕರ್ ಅವರ 60 ನೇ ಹುಟ್ಟು ಹಬ್ಬ ಆಚರಣೆಯಲ್ಲಿ ಶಾಸಕರಾದ ಅಶೋಕ್ ರೈ ಭಾಗವಹಿಸಿದರು. ಪುತ್ತೂರಿನ ನರಿಮೊಗರಿನಲ್ಲಿರುವ ರಮಣೀಯ ಎಸ್ಜಿ ಫಾರ್ಮ್ನಲ್ಲಿ ಅದ್ಧೂರಿಯಾಗಿ ಜರುಗಿತು.

 

ಒಂದು ‘ಬಿಂದು’ವಿನಿಂದ ಆರಂಭಿಸಿ, ಅದನ್ನು ಯಶಸ್ಸಿನ ‘ಸಿಂಧು’ವಾಗಿ ಪರಿವರ್ತಿಸಿದ ಎಸ್.ಜಿ. ಸಮೂಹ ಸಂಸ್ಥೆಗಳ ರೂವಾರಿ, ಸತ್ಯಶಂಕರ್ ಭಟ್ ಅವರ ಜೀವನದ 60 ವಸಂತಗಳ ಸಂಭ್ರಮ, ಪುತ್ತೂರಿನ ನರಿಮೊಗರಿನಲ್ಲಿರುವ ರಮಣೀಯ ಎಸ್ಜಿ ಫಾರ್ಮ್ನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಷಷ್ಟ್ಯಬ್ದಪೂರ್ತಿ ಸಮಾರಂಭವು ಕೇವಲ ಒಂದು ಆಚರಣೆಯಾಗಿರದೆ, ಅದೊಂದು ಸ್ಫೂರ್ತಿಯ ಸೆಲೆಯ ಅನಾವರಣವಾಗಿತ್ತು.

ಗ್ರಾಮೀಣ ಕನ್ನಡ ಶಾಲೆಯ ಅಂಗಳದಿಂದ ಜಗತ್ತಿನ ಉದ್ಯಮ ಭೂಪಟದಲ್ಲಿ ತಮ್ಮದೇ ಛಾಪು ಮೂಡಿಸಿದ ಸತ್ಯಶಂಕರ್ ಅವರ ಜೀವನಯಾನ, ಒಂದು ಸ್ಫೂರ್ತಿದಾಯಕ ಕಥನ. ಅವರ ಈ ಕ್ರಾಂತಿಕಾರಿ ಬದುಕಿನ ಪುಟಗಳನ್ನು ಈ ಕಾರ್ಯಕ್ರಮದಲ್ಲಿ ತೆರೆದಿಡಲಾಯಿತು.

ಸುಮಾರು ನಾಲ್ಕು ದಶಕಗಳ ಹಿಂದೆ, ಆರ್ಥಿಕ ಅಡಚಣೆಯಿಂದ ಪಿಯುಸಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ, ಕೇವಲ 15 ಸಾವಿರ ರೂಪಾಯಿಗಳ ಬ್ಯಾಂಕ್ ಸಾಲ ಮತ್ತು 5 ಸಾವಿರ ರೂಪಾಯಿಗಳ ಸರಕಾರಿ ಸಹಾಯಧನದಿಂದ ಆಟೋ ರಿಕ್ಷಾ ಚಾಲಕನಾಗಿ ಜೀವನ ಆರಂಭಿಸಿದ ಓರ್ವ ಯುವಕ, ಇಂದು 850 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಬೃಹತ್ ಸಾಮ್ರಾಜ್ಯದ ಅಧಿಪತಿಯಾಗಿ ಬೆಳೆದ ರೋಚಕ ಪಯಣವನ್ನು ವಿಡಿಯೋ ಸಾಕ್ಷ್ಯಚಿತ್ರದ ಮೂಲಕ ಅನಾವರಣಗೊಳಿಸಲಾಯಿತು. ಇದು ‘ಶೂನ್ಯದಿಂದ ಶಿಖರಕ್ಕೆ’ ಸಾಗಿದ ಅವರ ಅದಮ್ಯ ಸಾಹಸಕ್ಕೆ ಹಿಡಿದ ಕನ್ನಡಿಯಂತಿತ್ತು.

 

ಈ ಶುಭ ಸಂದರ್ಭದಲ್ಲಿ ಸಂಸದರಾದ ಕ್ಯಾ. ಬ್ರಿಜೇಶ ಚೌಟ, ಶಾಸಕರಾದ ಅಶೋಕ್ ರೈ, ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸಂಜೀವ ಮಠಂದೂರು ಸೇರಿದಂತೆ ನಾಡಿನ ಗಣ್ಯ ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದು, ಸತ್ಯಶಂಕರ್ ಭಟ್ ಅವರಿಗೆ ಹಾರೈಸಿ, ಅವರ ಸಾಧನೆಯನ್ನು ಕೊಂಡಾಡಿದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ರಂಜಿತಾ ಶಂಕರ್, ನಿರ್ದೇಶಕಿಯರಾದ ಕುಮಾರಿ ಮೇಘಾ ಶಂಕರ್, ಕುಮಾರಿ ಮಹಿಮಾ ಶಂಕರ್, ನಿರ್ದೇಶಕ ಮನಸ್ವಿತ್ ಶಂಕರ್ ಹಾಗೂ ಸುದನ್ವ ಬಿ. ಆಚಾರ್ಯ ಅವರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

‘ಬಿಂದು’ ಮಿನರಲ್ ವಾಟರ್, ‘ಬಿಂದು’ ಜೀರಾ, ‘ಸಿಪ್ಆನ್’ನಂತಹ 50ಕ್ಕೂ ಅಧಿಕ ಜನಪ್ರಿಯ ಪಾನೀಯಗಳು ಮತ್ತು ಕ್ರಿಸ್ಪಿ ತಿನಿಸುಗಳ ಮೂಲಕ ಮನೆಮಾತಾಗಿರುವ ಎಸ್.ಜಿ. ಸಮೂಹ ಸಂಸ್ಥೆಗಳ ಮೂಲಕ ಸತ್ಯಶಂಕರ್ ಅವರು ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ, ಗ್ರಾಮೀಣ ಭಾಗದ ಸಹಸ್ರಾರು ಕುಟುಂಬಗಳಿಗೆ ಆಶಾಕಿರಣವಾಗಿದ್ದಾರೆ. ತಮ್ಮ ವ್ಯಾಪಾರ ಜಾಲವನ್ನು ತೆಲಂಗಾಣ ರಾಜ್ಯಕ್ಕೂ ವಿಸ್ತರಿಸಿ, ಯಶಸ್ಸಿನ ಪತಾಕೆಯನ್ನು ಹಾರಿಸಿದ್ದಾರೆ.

ಇದೀಗ ಬಿಂದು ಸಾಮ್ರಾಜ್ಯ ಆಂಧ್ರಪ್ರದೇಶದ ವಿಶಾಖಪಟ್ಟಣಂ ಗೂ ಹರಡಿದ್ದು , ಜೂನ್ ತಿಂಗಳಲ್ಲಿ ಹೊಸ ಕಂಪನಿ ವಿಶಾಖಪಟ್ಟಣಂ ನಲ್ಲಿ ಶುಭಾರಂಭಗೊಳ್ಳಲಿದೆ.

ಸತ್ಯಶಂಕರ್ ಭಟ್ ಅವರ ಜೀವನಗಾಥೆ, ‘ದುಡಿದರೆ ದುಃಖವಿಲ್ಲ’ ಎಂಬ ಮಾತಿಗೆ ಹಿಡಿದ ಕನ್ನಡಿಯಂತಿದ್ದು, ಅದೆಷ್ಟೋ ಯುವಕರಿಗೆ ಪ್ರೇರಣೆಯ ಸೆಲೆಯಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement