Published
1 year agoon
By
Akkare Newsಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಾಲಿಬಾಲ್ ಹಾಗೂ ಥ್ರೋ ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು. ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪುರುಷರ ವಾಲಿಬಾಲ್ ತಂಡ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಮಹಿಳಾ ಥ್ರೋ ಬಾಲ್ ತಂಡ ಕ್ರಮವಾಗಿ ಚಾಂಪಿಯನ್ಸ್ ಟ್ರೋಫಿ ತಮ್ಮದಾಗಿಸಿಕೊಂಡರು.
ಅಂತೆಯೇ ಪುರುಷರ ವಾಲಿ ಬಾಲ್ ಪಂದ್ಯಾಟದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪುರುಷ ತಂಡ ರನ್ರ್ಸ್ ಟ್ರೋಫಿ ಪಡೆದರೆ ಥ್ರೋಬಾಲ್ ಪಂದ್ಯಾಟದಲ್ಲಿ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮಹಿಳಾ ತಂಡ ರನ್ರ್ಸ್ ಟ್ರೋಫಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಪ್ರಸಾದ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಸೋಲು ಗೆಲುವಿನ ಹಂಗಿಲ್ಲದೆ ಕೇವಲ ಆಡುವ ದೃಷ್ಟಿಕೋನದಿಂದ ಅಂಗಳಕ್ಕಿಳಿದಾಗ ಮನಸ್ಸಿಗೆ ಮುದ ದೊರಕುವುದಕ್ಕೆ ಸಾಧ್ಯ. ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಆಂತರಿಕ ಕ್ರೀಡೆಯನ್ನು ಆಯೋಜಿಸುವುದು ಅತ್ಯಂತ ಮುಖ್ಯ ಹಾಗೂ ಪರಿಣಾಮಕಾರಿ ಎಂದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ ಎ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ಮಹಾವಿದ್ಯಾಲಯದ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ ಉಪಸ್ಥಿತರಿದ್ದರು. ಅಂಬಿಕಾ ಮಹಾವಿದ್ಯಾಲಯದ ಅಂತಿಮ ಬಿ.ಕಾಂ ವಿದ್ಯಾರ್ಥಿ ಅನ್ಮಯ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಪಂದ್ಯಾಟಗಳನ್ನು ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ದೈಹಿಕ ಶಿಕ್ಷಕರಾದ ಸುಚಿತ್ರಾ ಹಾಗೂ ಮಹೇಶ್ ನಡೆಸಿಕೊಟ್ಟರು.