Published
1 year agoon
By
Akkare Newsಪುತ್ತೂರು: ಪುತ್ತೂರು ನಗರಸಭೆಯಲ್ಲಿ ತೆರವಾಗಿರುವ ಎರಡು ಸದಸ್ಯ ಸ್ಥಾನಗಳಿಗೆ ದ.27ರಂದು ಚುನಾವಣೆ ನಡೆಯಲಿದ್ದು ದ.8ರಂದು ಅಧಿಸೂಚನೆ ಪ್ರಕಟವಾಗಲಿದೆ. ಎರಡೂ ಸ್ಥಾನಗಳಿಗೂ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಲ್ಲದೆ ಈ ಬಾರಿ ಪುತ್ತಿಲ ಪರಿವಾರದಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯುವುದು ಸ್ಪಷ್ಟವಾಗಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ನಗರಸಭೆಯ ವಾರ್ಡ್ 1ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವರಾಮ ಸಪಲ್ಯ ಮತ್ತು ವಾರ್ಡ್ 11ರಲ್ಲಿ ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹಾ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿದೆ.
11ರಲ್ಲಿ ನೆಲ್ಲಿಕಟ್ಟೆ ವರ್ಸಸ್ ಸತೀಶ್ ನಾೖಕ್: ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹಾರವರ ನಿಧನದಿಂದ ತೆರವಾಗಿರುವ ನೆಲ್ಲಿಕಟ್ಟೆ ವಾರ್ಡ್ ನಂ.11ರಲ್ಲಿ ಈ ಬಾರಿ ಕಾಂಗ್ರೆಸ್ನಿಂದ ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಬಿಜೆಪಿಯಿಂದ ಮಾಜಿ ಪುರಸಭಾ ಸದಸ್ಯ ಸತೀಶ್ ನಾೖಕ್ ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ,ಸತೀಶ್ ನಾೖಕ್ ಇದನ್ನು ನಿರಾಕರಿಸಿದ್ದಾರೆ. ಬಿಜೆಪಿಯಿಂದ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರ ಹೆಸರೂ ಕೇಳಿ ಬರುತ್ತಿದೆ. ವಾರ್ಡ್ ನಂ.1 ಕಲ್ಲೇಗದಿಂದಲೂ ರಾಜೇಶ್ ಬನ್ನೂರು ಅವರ ಹೆಸರು ಪ್ರಚಲಿತವಿದೆ. ಮತ್ತೊಂದೆಡೆ ವಾರ್ಡ್ 11ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ದಾಮೋದರ ಭಂಡಾರ್ಕರ್ ಕೂಡಾ ಓರ್ವ ಆಕಾಂಕ್ಷಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರ ಆಯ್ಕೆ ಬಹುತೇಕ ಖಚಿತಗೊಂಡಿದೆ ಎಂದು ತಿಳಿದು ಬಂದಿದೆ.