ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಸರಣಿ ಕೊಲೆ ಆರೋಪಿ ಬಿಡುಗಡೆ. ಮನೆಗೆ ಸೇರಿಸಲು ಕುಟುಂಬಸ್ಥರ ವಿರೋಧ. ಜೈಲು ಬಳಿಯಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ಪೆರಿಯಡ್ಕದ ಪ್ರವೀಣ ಕುಮಾರ್

Published

on

ಮಂಗಳೂರು: ಮಂಗಳೂರಿನ ವಾಮಂಜೂರಿನಲ್ಲಿ 1994ರಲ್ಲಿ ನಡೆದ ಸರಣಿ ಕೊಲೆ ಪ್ರಕರಣದ ಆರೋಪಿ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿ ಪ್ರವೀಣ್‌ಕುಮಾರ್(58ವ.)ಸನ್ನಡತೆ ಆಧಾರದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಆದರೆ ಕೊಲೆ ಆರೋಪಿ ಪ್ರವೀಣ್‌ಕುಮಾರ್ ಮನೆಗೆ ಬರುವುದನ್ನು ಆತನ ಪತ್ನಿ, ಸಹೋದರ ಹಾಗೂ ಕುಟುಂಬಸ್ಥರ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಹಿಂಡಲಗಾ ಜೈಲಿನ ಬಳಿ ಟೈಲರ್ ಶಾಪ್ ತೆರೆದು ವೃತ್ತಿ ಜೀವನ ಪುನರಾರಂಭಿಸುವ ಮೂಲಕ ಬದುಕು ಕಟ್ಟಿಕೊಂಡಿರುವ ಬಗ್ಗೆ ವರದಿಯಾಗಿದೆ.

ಮಂಗಳೂರಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಪ್ರವೀಣ್ ಕುಮಾರ್ ಕುಡಿತ ಹಾಗೂ ಸಿಂಗಲ್ ನಂಬರ್ ಲಾಟರಿಯ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದ. 1994ರ ಫೆ.23ರ ರಾತ್ರಿ ತಂದೆಯ ತಂಗಿ ವಾಮಂಜೂರಿನಲ್ಲಿರುವ ಅಪ್ಪಿ ಶೇರಿಗಾರ್ತಿ ಎಂಬವರ ಮನೆಗೆ ತೆರಳಿ ಆಮ್ಲಟ್ ಮಾಡಿಸಿ ಊಟ ಮಾಡಿ ಮಲಗಿದ್ದ. ಮಧ್ಯರಾತ್ರಿ ಪಿಕ್ಕಾಸಿನ ಹಿಡಿ ತೆಗೆದು ಅತ್ತೆ ಅಪ್ಪಿ ಶೇರಿಗಾರ್ತಿ, ಅವರ ಮಗಳು ಶಕುಂತಳಾ, ಮಗ ಗೋವಿಂದ ಮತ್ತು ಮೊಮ್ಮಗಳು ದೀಪಿಕಾಳ ತಲೆಗೆ ಹೊಡೆದು ಕೊಲೆ ಮಾಡಿ ಚಿನ್ನ. ನಗದು ದೋಚಿ ಪರಾರಿಯಾಗಿದ್ದ. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು ಬಳಿಕ ಪ್ರವೀಣ್‌ ಕುಮಾರ್‌ನನ್ನು ಬಂಧಿಸಿದ್ದರು. ಪೊಲೀಸ್ ವಶದಲ್ಲಿದ್ದ ಈತ ಒಮ್ಮೆ ತಪ್ಪಿಸಿಕೊಂಡಿದ್ದರೂ ಮತ್ತೆ ಬಂಧನಕ್ಕೊಳಗಾಗಿದ್ದ. ನಾಲ್ವರ ಕೊಲೆ ಪ್ರಕರಣ ಕೆಳ ಹಂತದ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ನ ತನಕ ನಡೆದು ಅಪರಾಧ ಸಾಬೀತುಗೊಂಡಿತ್ತು. 2003ರಲ್ಲಿ ಸುಪ್ರೀಂ ಕೋರ್ಟ್ ಪ್ರವೀಣ್‌ಕುಮಾರ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಅಪರಾಧಿ ಪ್ರವೀಣ್‌ಕುಮಾ‌ರ್ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದ. ಆದರೆ ಈ ಅರ್ಜಿ ರಾಷ್ಟ್ರಪತಿ ಭವನದಲ್ಲಿ ವಿಲೇವಾರಿಯಾಗದೆ ಬಾಕಿ ಉಳಿದಿತ್ತು.





ಗಲ್ಲುಶಿಕ್ಷೆಯಿಂದ ಪಾರು:
ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರ ಗಲ್ಲುಶಿಕ್ಷೆ ರದ್ದು ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು ಮೂವರು ಹಂತಕರನ್ನೂ ಮರಣದಂಡನೆಯಿಂದ ಪಾರು ಮಾಡಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಪ್ರವೀಣ್ ಕುಮಾರ್ ಮರಣ ದಂಡನೆ ಶಿಕ್ಷೆ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮರಣ ದಂಡನೆ ಶಿಕ್ಷೆ ರದ್ದು ಮಾಡಿ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಆದೇಶ ನೀಡಿತ್ತು. ಪ್ರವೀಣ್‌ಕುಮಾ‌ರ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ.

ಜೈಲಿನಲ್ಲಿ ಸನ್ನಡತೆ:
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಲ ಖೈದಿಗಳ ಜೀವಾವಧಿ ಶಿಕ್ಷೆಯನ್ನು ಕ್ಷಮಿಸಿ ಸನ್ನಡತೆಯ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಈ ಪಟ್ಟಿಯಲ್ಲಿ ಪ್ರವೀಣ್ ಕುಮಾರ್ ಹೆಸರು ಇತ್ತು. ಕೊಲೆಪಾತಕಿ ಪ್ರವೀಣ್‌ನನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವ ವಿಚಾರ ಕುಟುಂಬಸ್ಥರಿಗೆ ಸಿಗುತ್ತಿದ್ದಂತೆ ಪ್ರವೀಣ್‌ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರವೀಣನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ದ.ಕ.ಜಿಲ್ಲಾ ಪೊಲೀಸ್ ಅಧಿಕ್ಷಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಕಾನೂನಿನ ಪ್ರಕಾರ ಒಂದು ಬಾರಿ ರಾಷ್ಟ್ರಪತಿಗಳು ಕ್ಷಮಾದಾನ ನೀಡಿ, ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಅನುಮತಿ ನೀಡಿದಲ್ಲಿ ಆ ಅಪರಾಧಿಯನ್ನು ಜೈಲಿನಲ್ಲಿ ಮತ್ತೆ ಉಳಿಸುವಂತಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ಜೈಲು ಅಧಿಕಾರಿಗಳು ಅನಿವಾರ್ಯವಾಗಿ ಪ್ರವೀಣ್‌ನನ್ನು ಜೈಲಿನಿಂದ ಬಿಡುಗಡೆಗೊಳಿಸಿದರು.

ಜೈಲು ಸಮೀಪವೇ ಟೈಲರ್ ಶಾಪ್:
ಕೆಲ ತಿಂಗಳುಗಳ ಹಿಂದೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಪ್ರವೀಣ್ ಕುಮಾರ್‌ನನ್ನು ಬಿಡುಗಡೆ ಮಾಡಲಾಗಿದೆ. ಮತ್ತೆ ಮನೆಗೆ ಬರಲು ಕುಟುಂಬದವರ ವಿರೋಧವಿದ್ದ ಕಾರಣ ಪ್ರವೀಣ್ ಬೆಳಗಾವಿ ಹಿಂಡಲಗಾ ಜೈಲು ಸಮೀಪವೇ ಟೈಲರ್ ಶಾಪ್ ತೆರೆದಿದ್ದಾನೆ. ಟೈಲರ್ ಕೆಲಸದಲ್ಲಿ ನಿಪುಣನಾದ ಕಾರಣ ಜೈಲಿನ ಸುತ್ತಮುತ್ತ ಜನರು ಮಾತ್ರವಲ್ಲದೆ ಜೈಲಿನ ಸಿಬ್ಬಂದಿ, ಅಧಿಕಾರಿಗಳು ಈತನಲ್ಲಿಯೇ ಬಟ್ಟೆ ಹೊಲಿಗೆಗೆ ನೀಡುತ್ತಿದ್ದಾರೆ. ಈತ ತನ್ನ ಶಾಪ್‌ನಲ್ಲಿ ನಾಲ್ವರು ಸಿಬ್ಬಂದಿಯನ್ನು ಕೆಲಸಕ್ಕಿಟ್ಟುಕೊಂಡಿರುವುದಾಗಿ ವರದಿಯಾಗಿದೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಕುಟುಂಬದವರಿಗೆ ನಾನು ಬೇಡ ಅಂದ ಮೇಲೆ ಊರಿಗೆ ಹೋಗುವುದಿಲ್ಲ. ನಾನು ಬೆಳಗಾವಿಯಲ್ಲಿಯೇ ಉಳಿಯಲು ನಿರ್ಧರಿಸಿದ್ದೇನೆ ಎಂದು ಪ್ರವೀಣ್ ಹೇಳಿರುವುದಾಗಿ ವರದಿಯಾಗಿದೆ.

ಕುಟುಂಬದಿಂದ ಮತ್ತೆ ಪೊಲೀಸ್ ಮೊರೆ:
ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆಗೊಂಡಿರುವ ಪ್ರವೀಣ್‌ ಕುಮಾರ್‌ನಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸಬೇಕೆಂದು ಆತನ ಕುಟುಂಬಸ್ಥರು ಮತ್ತೆ ಪೊಲೀಸ್ ಇಲಾಖೆ ಹಾಗೂ ಸರಕಾರದ ಮೊರೆ ಹೋಗಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಪ್ರವೀಣ್‌ನನ್ನು ಸನ್ನಡತೆಯ ಕಾರಣ ನೀಡಿ ಬಿಡುಗಡೆ ಮಾಡಿರುವ ಮಾಹಿತಿ ಬಂದಿತ್ತು. ಬಳಿಕ ನ.7ರಂದು ರಾತ್ರಿ ಆತ ತಮ್ಮನಿಗೆ ಕರೆ ಮಾಡಿ ಜೀವಬೆದರಿಕೆ ಹಾಕಿದ್ದ. ಹಾಗಾಗಿ ನಾವು ಜೀವ ಭಯದಿಂದ ಇದ್ದೇವೆ. ಪೊಲೀಸರು ಆತನ ಚಲನವಲನಗಳನ್ನು ನಿತ್ಯವೂ ಗಮನಿಸಬೇಕು. ದ.ಕ.ಜಿಲ್ಲೆಗೆ ಬಾರದಂತೆ ಗಡಿಪಾರು ಮಾಡಬೇಕು ಎಂದು ಕುಟುಂಬಸ್ಥರು ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಪ್ರವೀಣ್ ಬಿಡುಗಡೆಯಾಗಲಿದ್ದಾನೆ ಎಂಬ ಮಾಹಿತಿ ಸಿಕ್ಕಿದ ಕೂಡಲೇ 2022ರಲ್ಲಿ ಪೊಲೀಸ್ ಆಯುಕ್ತರು, ಗೃಹಸಚಿವರು, ರಾಜ್ಯಪಾಲರಿಗೆ ಬಿಡುಗಡೆ ಮಾಡದಂತೆ ಮನವಿ ಮಾಡಿದ್ದೆವು. ಆದರೆ ಪ್ರಯೋಜನವಾಗಲಿಲ್ಲ. ಅನಂತರ ಬಿಡುಗಡೆಯ ಸುದ್ದಿ ತಿಳಿದ ಕೂಡಲೇ ಮತ್ತೊಮ್ಮೆ ರಕ್ಷಣೆಗಾಗಿ ಮನವಿ ಮಾಡಿದ್ದೆವು. ಪ್ರವೀಣ್ ಆತನ ತಮ್ಮನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾಗಲೂ ಪೊಲೀಸರಿಗೆ ತಿಳಿಸಿದ್ದೆವು. ಆದರೆ ಪೊಲೀಸರಿಂದ ಸ್ಪಂದನೆ ಸಿಕ್ಕಿಲ್ಲ. ತನ್ನ ಸಂಬಂಧಿಕರನ್ನೇ ಕೊಲೆ ಮಾಡಿದ್ದ ಆತ ಯಾವುದೇ ಕೃತ್ಯ ಮಾಡಲು ಹಿಂಜರಿಯುವವನಲ್ಲ. ದ್ವೇಷ ಸಾಧಿಸುವ ಆತಂಕವೂ ಇದೆ. ಕುಟುಂಬದಲ್ಲಿ ಹಲವಾರು ಹಿರಿಯ ನಾಗರಿಕರಿದ್ದಾರೆ. ಹಾಗಾಗಿ ಪೊಲೀಸರು ನಮಗೆ ರಕ್ಷಣೆ ನೀಡಬೇಕು. ಪ್ರವೀಣನನ್ನು ಓರ್ವ ಉತ್ತಮ ವ್ಯಕ್ತಿಯಂತೆ ಬಿಂಬಿಸುವುದರಿಂದ ಸಮಾಜಕ್ಕೂ ಕೆಟ್ಟ ಸಂದೇಶ ಹೋಗುತ್ತದೆ. ಸಂಬಂಧಿಕರು ಈ ಬಗ್ಗೆ ಗಮನಹರಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement