Published
10 months agoon
By
Akkare Newsಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣನವರಿಗೆ ಅಭಿನಂದನೆ ಸಲ್ಲಿಸಿ ಪತ್ರಿಕಾ ಹೇಳಿಕೆ ಬಿಡಿಗಡೆಮಾಡಿರುವ ಅವರು, ಇದು ನಮ್ಮ ಸರ್ಕಾರದ 9 ತಿಂಗಳ ಜನಪರವಾದ ಆಡಳಿತ ಮತ್ತು ಸರ್ಕಾರದ ಬಗ್ಗೆ ಪ್ರಜ್ಞಾವಂತ ಮತದಾರರು ಇಟ್ಟಿರುವ ವಿಶ್ವಾಸದ ಗೆಲುವಾಗಿದೆ ಎಂದಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಸೋಲು ಕಂಡಿವೆ. ಇದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ನಡುವಿನ ಮೈತ್ರಿಯೇ ಹೊರತು ಎರಡೂ ಪಕ್ಷಗಳ ಮತದಾರರ ನಡುವಿನ ಮೈತ್ರಿಯಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಕುಟುಂಬದ ಹಿತಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿರುವ ಜೆಡಿಎಸ್ ಪಕ್ಷವನ್ನು ಹಾಗೂ ಸದಾಕಾಲ ಕುಟುಂಬ ರಾಜಕಾರಣದ ವಿರುದ್ಧ ಟೀಕೆ ಮಾಡಿ, ಒಂದು ಕುಟುಂಬವೇ ರಾಜಕೀಯ ಪಕ್ಷದಂತಿರುವ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿಯನ್ನು ಮತದಾರ ಬಂಧುಗಳ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.ಸ್ವಾರ್ಥ ಸಾಧನೆಯೊಂದೇ ಗುರಿಯಾಗಿರುವ ಈ ಅಪವಿತ್ರ ಮೈತ್ರಿಗೆ ಗ್ಯಾರಂಟಿ, ವಾರೆಂಟಿ ಯಾವುದೂ ಇಲ್ಲ.ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ ಎಂದಿದ್ದಾರೆ.