Published
9 months agoon
By
Akkare Newsಮಂಗಳೂರು, ಮಾ.13: ನೇರ ಹಣಾಹಣಿಗೆ ಸಾಕ್ಷಿಯಾಗಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಿಜೆಪಿ ಮತ್ತು ಕಾಂಗ್ರೆಸ್ ಹುರಿಯಾಳು ಯಾರೆಂದು ಬಹುತೇಕ ಅಂತಿಮವಾಗಿದೆ. ಬಿಜೆಪಿಯಿಂದ ಹೊಸ ಮುಖ ಕ್ಯಾಬೃಜೇಶ್ ಚೌಟ ಮತ್ತು ಕಾಂಗ್ರೆಸಿನಿಂದ ಯುವ ವಕೀಲ ಪದ್ಮರಾಜ್ ರಾಮಯ್ಯ ಹೆಸರು ಫೈನಲ್ ಆಗಿದೆ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.
ಮೂರು ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡುವುದು ಖಚಿತಗೊಂಡಿದೆ. ಇದರ ಸುಳಿವು ಪಡೆದ ನಳಿನ್ ಕುಮಾರ್, ಪಕ್ಷ ಹೇಳಿದರೆ ಗುಡಿಸುವುದಕ್ಕೂ ರೆಡಿ, ಒರೆಸುವುದಕ್ಕೂ ರೆಡಿ ಎನ್ನುವ ಮೂಲಕ ತನ್ನ ಸ್ಥಾನ ಬಿಟ್ಟು ಕೊಡಲು ರೆಡಿಯಾಗಿರುವುದರ ಸೂಚನೆ ನೀಡಿದ್ದಾರೆ. ಈಗಾಗಲೇ ಕಾರ್ಯಕರ್ತರ ಕಡೆಯಿಂದ ಭಾರೀ ವಿರೋಧ ಎದುರಿಸುತ್ತಿರುವ ನಳಿನ್ ಕುಮಾರ್ ಬಗ್ಗೆ ರಾಜ್ಯ ಬಿಜೆಪಿಯಿಂದಲೇ ಹೈಕಮಾಂಡಿಗೆ ವರದಿ ಒಪ್ಪಿಸಲಾಗಿದೆ.
ಹೀಗಾಗಿ ಸಂಸತ್ ಸ್ಥಾನಕ್ಕೆ 2019ರ ಚುನಾವಣೆಯಲ್ಲೇ ಆಕಾಂಕ್ಷಿಯಾಗಿದ್ದ ಮಾಜಿ ಸೇನಾನಿ, ಹಾಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಬೃಜೇಶ್ ಚೌಟರನ್ನು ರಾಜ್ಯ ಬಿಜೆಪಿ ಹೊಸ ಮುಖವಾಗಿ ಆಯ್ಕೆ ಮಾಡಿದೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸುವ ಸಾಧ್ಯತೆಯಿದೆ.
ಇತ್ತ ಕಾಂಗ್ರೆಸಿನಲ್ಲಿ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮತ್ತು ಪದ್ಮರಾಜ್ ಹೆಸರು ಮುಂಚೂಣಿಯಲ್ಲಿತ್ತು. ಉಡುಪಿಯಲ್ಲೇ ಸಕ್ರಿಯ ರಾಜಕೀಯದಲ್ಲಿದ್ದ ವಿನಯ ಕುಮಾರ್ ಸೊರಕೆ ಅವರಿಗೆ ಟಿಕೆಟ್ ನೀಡುವುದಕ್ಕೆ ಮಂಗಳೂರಿನ ಕಾಂಗ್ರೆಸಿಗರಿಂದಲೇ ವಿರೋಧ ಇದೆ. ಸೊರಕೆ ಸ್ಪರ್ಧಿಸಿದರೆ, ಸೋಲಿನ ಅಂತರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಅದರಿಂದ ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಲಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಹೀಗಾಗಿ ಬಿಲ್ಲವ ಮುಂದಾಳು, ಬೆಳದಿಂಗಳು ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯ ನಡೆಸುತ್ತಿರುವ ಪದ್ಮರಾಜ್ ರಾಮಯ್ಯ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಪದ್ಮರಾಜ್ ಅವರನ್ನು ಕಣಕ್ಕಿಳಿಸುವುದಕ್ಕೆ ರಾಜ್ಯ ಮತ್ತು ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ದು ಮಾರ್ಚ್ 15ರಂದು ಮೂರನೇ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿದೆ ಎನ್ನುವುದು ಮಾಹಿತಿ.