Published
8 months agoon
By
Akkare Newsಪುತ್ತೂರು ಎಪ್ರಿಲ್ 13: ಮೊಸಳೆಯ ಮೃತದೇಹವೊಂದು ಕುಮಾರಧಾರಾ ನದಿಯ ಪಂಜ – ಕಡಬ ಸಂಪರ್ಕ ರಸ್ತೆಯಲ್ಲಿ ಸಿಗುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಪತ್ತೆಯಾಗಿದೆ.
2 ವರ್ಷದ ಮೊಸಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಿಸಿಲಿಗೆ ನದಿ ನೀರಿನ ಹರಿವು ಕಡಿಮೆಯಾಗಿದ್ದು, ಬಿಸಿಲಿನ ಪ್ರಖರತೆಗೆ ಬಿಸಿಯಾಗಿ ಸಾವನ್ನಪ್ಪಿರಬಹುದು ಅಥವಾ ನೀರು ಕಲುಷಿತಗೊಂಡು ಮೃತಪಟ್ಟಿರಬಹುದೇ ಎಂಬ ಶಂಕೆಯನ್ನು ಜನಸಾಮಾನ್ಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಅಗಮಿಸಿ ಮೃತದೇಹವನ್ನು ತೆರವು ಮಾಡಿದ್ದಾರೆ.
ಮೊಸಳೆಯ ಮೃತದೇಹ ಪತ್ತೆಯಾದಲ್ಲಿ ಮೀನುಗಳು ಕೂಡ ಇದ್ದು ಅವುಗಳಿಗೆ ಏನೂ ಆಗಿಲ್ಲ. ಅಲ್ಲದೆ ಮೃತದೇಹ ಸಿಕ್ಕಿರುವ ಸ್ಥಳದಲ್ಲಿ ನೀರು ಹರಿಯುತ್ತಿದೆ. ಇನ್ನೊಂದು ಮೊಸಳೆಯ ಜತೆಗಿನ ಕಾಳಗದಲ್ಲಿ ಸಾವನ್ನಪ್ಪುವ ಸಾಧ್ಯತೆ ಇದ್ದರೂ ದೇಹದಲ್ಲಿ ಗಾಯ ಕಂಡುಬಂದಿಲ್ಲ.
ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸಿ ವರದಿ ನೀಡಲಿದ್ದು, ಬಳಿಕವೇ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.