Published
7 months agoon
By
Akkare Newsಪುತ್ತೂರು : ದಾಖಲೆಯ ಏರಿಕೆ ಕಂಡಿದ್ದ ಕೊಕ್ಕೊ ಧಾರಣೆ ಇಳಿಕೆಯ ಬೆನ್ನಲ್ಲೇ ಕಾಳುಮೆಣಸು ಧಾರಣೆ ಜಿಗಿತದ ಸೂಚನೆ ನೀಡಿದೆ
ಕರಾವಳಿಯ ಪ್ರಧಾನ ಬೆಳೆಯಾದ ಅಡಿಕೆಗೆ ಉಪ ಬೆಳೆಯಾಗಿ ಕೃಷಿಕರ ಕೈ ಹಿಡಿಯುವ ಕಾಳುಮೆಣಸಿಗೆ ಕೆಲವು ವರ್ಷಗಳ ಹಿಂದೆ ಚಿನ್ನದ ಧಾರಣೆ ಇತ್ತು. ವಿದೇಶಗಳಿಂದ ಕಳಪೆ ದರ್ಜೆಯ ಕಾಳುಮೆಣಸು ಆಮದಾದ ಪರಿಣಾಮ ಧಾರಣೆ ಕುಸಿತ ಕಂಡಿತ್ತು.
615 ರೂ. ತನಕ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲೂ ಕಾಳುಮೆಣಸು ಧಾರಣೆ ಏರಿಕೆ ಆಗುತ್ತಿರುವುದು ಉತ್ತಮ ಬೆಳವಣಿಗೆ. ಇಳುವರಿ ಕೊರತೆ, ಹವಾಮಾನ ಪರಿಸ್ಥಿತಿಗಳಿಂದಾಗಿ ಉತ್ಪಾದನೆಯೂ ಕುಸಿತ ಕಂಡಿದ್ದು ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಕಾಳುಮೆಣಸು ಧಾರಣೆ 600 ರೂ. ದಾಟಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮೇ 21ರಂದು ಕೆ.ಜಿ.ಗೆ 580-590 ರೂ. ಇದ್ದರೆ ಹೊರ ಮಾರುಕಟ್ಟೆಯಲ್ಲಿ 600ರಿಂದ 615 ರೂ. ತನಕ ದಾಖಲಾಗಿದೆ. ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ವಿಯೆಟ್ನಾಂನಲ್ಲಿ ಗರಿಷ್ಠ
ವಿಯೆಟ್ನಾಂನಲ್ಲಿ ಕಾಳುಮೆಣಸು ಧಾರಣೆ ದಾಖಲೆ ಬರೆದಿದೆ ಅನ್ನುತ್ತಿದೆ ವರದಿ. ಕಳೆದ ವಾರಕ್ಕಿಂತ ಈ ವಾರದ ಧಾರಣೆ ಶೇ. 40ರಷ್ಟು ಏರಿಕೆ ಕಂಡಿದೆ. ಯೂರೋಪ್, ಯುಎಸ್ ಮತ್ತು ಚೀನದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪೂರೈಕೆ ಕೊರತೆ ಧಾರಣೆ ಏರಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹವಾಮಾನ ಪರಿಸ್ಥಿತಿಗಳಿಂದಾಗಿ ಕಾಳುಮೆಣಸು ಬೆಳೆ ಕೈ ಕೊಟ್ಟಿದೆ. ಹೀಗಾಗಿ ಬೆಳೆಗಾರರು ಪರ್ಯಾಯ ಕೃಷಿಯತ್ತ ದೃಷ್ಟಿ ಹಾಯಿಸಿರುವುದರಿಂದ ಸಹಜವಾಗಿ ವಿಯೆಟ್ನಾಂಗೆ ಮುಂದಿನ ಕೆಲವು ವರ್ಷಗಳ ಕಾಲ ಕಾಳುಮೆಣಸು ಕೊರತೆ ಉಂಟಾಗಲಿದೆ. ಪರಿಣಾಮ ಆ ದೇಶದಿಂದ ಬೇರೆ ದೇಶಗಳಿಗೆ ಕಾಳು ಮೆಣಸಿನ ರಫ್ತು ಕೂಡ ಕುಸಿದಿದೆ.