Published
7 months agoon
By
Akkare Newsಪುತ್ತೂರು:ಪ್ರಗತಿಪರ ಕೃಷಿಕ, ಹಿರಿಯ ಕಾಂಗ್ರೆಸ್ ಮುಖಂಡ, ಕುಂಬ್ರ ಮಂಡಲ ಪ್ರಧಾನರಾಗಿದ್ದ ಒಳಮೊಗ್ರು ಗ್ರಾಮದ ಚಿಲ್ಮೆತ್ತಾರು ನಾರಾಯಣ ರೈಯವರಿಗೆ ಶ್ರದ್ಧಾಂಜಲಿ ಸಭೆಯು ಮೇ.27ರಂದು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಬಂಟರ ಭವನದಲ್ಲಿ ನಡೆಯಿತು.ನುಡಿ ನಮನ ಸಲ್ಲಿಸಿದ ಡಾ.ಪಿ.ಬಿ ರೈ ಪ್ರತಿಷ್ಠಾನದ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಚಿಲ್ಮೆತ್ತಾರು ನಾರಾಯಣ ರೈಯವರು ಆದರ್ಶ ಕೃಷಿಕ, ರಾಜಕೀಯ ಮುಂದಾಳುವಾಗಿದ್ದರು. ಬಂಟ ಸಮಾಜದ ದೀಮಂತ ವ್ಯಕ್ತಿ. ಮಂಡಲ ಪ್ರಧಾನರಾಗಿ ಆದರ್ಶಯುತವಾದ ಕೆಲಸ ಮಾಡಿದವರು. ಉನ್ನತ ಹುದ್ದೆಯ ಆಸೆ ಅವರಲ್ಲಿರಲಿಲ್ಲ. ತನಗೆ ದೊರೆತ ಅವಕಾಶ ಸದುಪಯೋಗ ಪಡಿಸಿಕೊಂಡು ಮಾದರಿಯಾಗಿದ್ದರು. ಹಿರಿಯ ಅತ್ಯಂತ ಗೌರವ ನೀಡಿದ ವ್ಯಕ್ತಿಯಾಗಿದ್ದ ಇವರು ಕುಟುಂಬ, ಸಮಾಜ, ಬಂದು ವರ್ಗದವರೊಂದಿಗೆ ಆತ್ಮೀಯತೆಯಿಂದ ಇದ್ದವರು. ಸಮಾಜದಲ್ಲಿ ಇನ್ನೊಬ್ಬರ ಕಷ್ಟದಲ್ಲಿ ನಾವು ಹೇಗೆ ಭಾಗಿಗಳಾಗಬೇಕು ಎನ್ನುವುದನ್ನು ತೋರಿಸಿಕೊಟ್ಟವರಾಗಿದ್ದಾರೆ ಎಂದರು.
ಜಗಜೀವನ್‌ದಾಸ್ ರೈ ಮಾತನಾಡಿ, ನಾರಾಯಣ ರೈಯವರು ಕಠಿಣ ಪರಿಶ್ರಮದ ಮೂಲಕ ಕೃಷಿಯಲ್ಲಿ ಖುಷಿ ಪಡೆದ ಕೃಷಿಕರಾಗಿದ್ದವರು. ಅವರಿಗೆ ತಿಳಿಯದ ಕೃಷಿಯ ವಿಧಾನಗಳಿಲ್ಲ. ಉದಾರ ದಾನಿಯಾಗಿದ್ದ ಅವರ ಪಾತ್ರವಿರದ ಕ್ಷೇತ್ರವಿಲ್ಲ. ಇತರರನ್ನು ಖುಷಿ ಪಡಿಸುವುದೇ ಅವರ ಜೀವನವಾಗಿತ್ತು. ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು. ದೈವ ದೇವರ ಕೆಲಸವನ್ನು ಪ್ರೀತಿಯಿಂದ ನಿರ್ವಹಿಸಿದ್ದ ಅವರು ಚಿಲ್ಮೆತ್ತಾರು ಕುಟುಂಬದ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದರು.
ಸಂತೋಷ ಭಂಡಾರಿ ಚಿಲ್ಮೆತ್ತಾರು ಮಾತನಾಡಿ, ನಮ್ಮೆಲ್ಲರ ಪ್ರೀತಿಯ ಮಾವನವರಾಗಿರುವ ನಾರಾಯಣ ರೈಯವರು ಎಲ್ಲರಿಗೂ ಬೇಕಾದವರು. ಕುಟುಂಬದಲ್ಲಿ ಯಾರಿಗೇ ಏನೇ ಸಮಸ್ಯೆ ಬಂದರೂ ಕೂಡಲೇ ಸ್ಪಂದನೆ ನೀಡುತ್ತಿದ್ದ ಅವರು ನಮ್ಮ ಕುಟುಂಬಕ್ಕೆ ಶಕ್ತಿಯಾಗಿದ್ದವರು ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಅಕ್ಷಯ ರೈ ದಂಬೆಕಾನ, ಮಿತ್ರಂಪಾಡಿ ಪುರಂದರ ರೈ, ಮಹಾಬಲ ರೈ ವಳತ್ತಡ್ಕ, ಮುರಳೀಧರ ರೈ ಮಠಂತಬೆಟ್ಟು, ರವೀಂದ್ರ, ದಯಾನಂದ ರೈ ಕೋರ್ಮಂಡ, ರಮೇಶ್ ರೈ ಡಿಂಬ್ರಿ, ಪ್ರಕಾಶಚಂದ್ರ ಆಳ್ವ, ಸದಾನಂದ ಶೆಟ್ಟಿ ಕೂರೇಲು, ದಯಾನಂದ ರೈ ಮನವಳಿಕೆ, ಅರಿಯಡ್ಕ ಚಿಕ್ಕಪ್ಪ ನಾಕ್, ಎ.ಕೆ ಜಯರಾಮ ರೈ, ಕಡಮಜಲು ಸುಭಾಸ್ ರೈ, ಮೃತರ ಪತ್ನಿ ಇಂದಿರಾ ಎನ್ ರೈ, ಪುತ್ರ ಸಂದೀಪ್ ರೈ, ಸೊಸೆ ಮನಿಷಾ ಹಾಗೂ ಮೊಮ್ಮಕ್ಕಳು ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.