Published
7 months agoon
By
Akkare Newsಮಂಗಳೂರು, ಮೇ 29: ಕಡಲನಗರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಫಲಿತಾಂಶ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 2019ಕ್ಕೆ ಹೋಲಿಸಿದರೆ 2024ರ ಚುನಾವಣೆಯಲ್ಲಿ 66,440 ಮತಗಳ ಹೆಚ್ಚಳವಾಗಿದೆ. ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 13,43,213 ಮತಗಳು ಚಲಾವಣೆಯಾಗಿದ್ದು, ಈ ಬಾರಿ 14,09,653ಕ್ಕೆ ಏರಿಕೆಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಕಡಲ ನಗರಿ ದಕ್ಷಿಣ ಕನ್ನಡದಲ್ಲಿ ಗೆಲುವಿನ ಲೆಕ್ಕಚಾರ ಜೋರಾಗಿದೆ. 1951 ರಿಂದ 2019 ರವರೆಗೆ ಒಟ್ಟು 16 ಚುನಾವಣೆಗಳು ಈ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎಂಟು ಬಾರಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಒಂಬತ್ತು ಬಾರಿ ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದಾರೆ.
2009, 2014, 2019 ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಸತತ ಮೂರು ಬಾರಿ ಗೆಲುವು ಸಾಧಿಸಿದ ಕ್ಷೇತ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ.
ಆದರೆ ಈ ಬಾರಿ ನಳಿನ್ ಕುಮಾರ್ ಕಟೀಲ್ ಬದಲು ಬಿಜೆಪಿಯಿಂದ ಯುವ ಮತ್ತು ಹೊಸ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಕಾಂಗ್ರೆಸ್‌ನಿಂದಲೂ ಯುವ ಅಭ್ಯರ್ಥಿ ಪದ್ಮರಾಜ್ ಪೂಜಾರಿಗೆ ಮಣೆಹಾಕಲಾಯಿತು. ಇದರಿಂದ ಕಡಲ ನಗರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಹೊಸ ಲೆಕ್ಕಚಾರ ಆರಂಭ ಮಾಡಿದೆ.
2019ರ ಲೋಕಸಭಾ ಚುನಾವಣೆಯಲ್ಲಿ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 7,74,285 ಮತಗಳನ್ನು ಗಳಿಸಿ ವಿಜಯಶಾಲಿಯಾದರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ಎಂ.ರೈ ಅವರು 499,664 ಮತಗಳನ್ನು ಪಡೆದರು. ಬರೋಬ್ಬರಿ 2,74,621 ಮತಗಳ ಅಂತರದಿಂದ ನಳಿನ್ ಕುಮಾರ್ ಕಟೀಲ್ ಗೆಲುವು ಸಾಧಿಸಿದ್ದರು.
2014 ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಅವರನ್ನು 143,709 ಮತಗಳ ಅಂತರದಿಂದ ಸೋಲಿಸಿದರು. ನಳಿನ್ ಕುಮಾರ್ ಕಟೀಲ್ 6,42,739 ಮತಗಳನ್ನು ಪಡೆದರೆ, ಜನಾರ್ದನ ಪೂಜಾರಿ 4,99,030 ಮತಗಳನ್ನು ಪಡೆದಿದ್ದರು.
ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಹೊಸ ಮುಖಗಳಾಗಿರುವುದರಿಂದ ಗೆಲುವಿನ ಲೆಕ್ಕಚಾರ ಕಡಲ ನಗರಿಯಲ್ಲಿ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಪರವಾಗಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಭರ್ಜರಿ ರೋಡ್ ನಡೆಸಿದ್ದರು. ಸದ್ಯ ದಕ್ಷಿಣ ಕನ್ನಡ ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರ ಒಂದೆಡೆಯಾದರೆ,
ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರವಿದ್ದು, ರಾಜ್ಯ ಕಾಂಗ್ರೆಸ್ ನೀಡಿರುವ ಪಂಚ ಗ್ಯಾರಂಟಿಗಳು ಈ ಬಾರಿ ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆದಿದೆ. ಜೊತೆಗೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಹಾಗೂ ಕೆಲವು ಹಿಂದೂ ಮುಖಂಡರ ನಡುವಿನ ಅಸಮಾಧಾನದಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವ ಸಾಧ್ಯತೆ ಇದೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಪರವಾಗಿಯು ರಾಜ್ಯ ನಾಯಕರುಗಳು ಭರ್ಜರಿ ಪ್ರಚಾರ ನಡೆಸಿದ್ದರು. ಈ ಹಿನ್ನಲೆಯಲ್ಲಿ ಇಬ್ಬರೂ ಗೆಲ್ಲುವ ಉತ್ಸುಕದಲ್ಲಿದ್ದಾರೆ. ಆದರೆ ಮತದಾರ ಪ್ರಭು ಯಾರ ಕೈ ಹಿಡಿದಿದ್ದಾರೆ ಎಂದು ಜೂನ್ 4 ರಂದು ಬಹಿರಂಗವಾಗಲಿದೆ.