ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಲೋಕಸಭಾ ಚುನಾವಣೆ ಮತಏಣಿಕೆ: ರಾಜ್ಯಾಧ್ಯಂತ ಜೂ.04 ರಿಂದ 05 ರಂದು 144 ಸೆಕ್ಷನ್ ಅಡಿ ‘ನಿಷೇದಾಜ್ಞೆ’ ಜಾರಿ

Published

on

ಮಂಗಳೂರು / ದಕ್ಷಿಣ/ ಕನ್ನಡ : :ಎರಡು ಹಂತಗಳಲ್ಲಿ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಹಿನ್ನೆಲೆಯಲ್ಲಿ ಮತ ಎಣಿಕೆಯು ಜೂನ್.4ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂನ್.04 ರ ಬೆಳಗ್ಗೆ 6 ರಿಂದ ಜೂನ್.05 ರ ಬೆಳಗ್ಗೆ 6.00 ಗಂಟೆಯವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಅದರಲ್ಲಿ ನಿಷೇದಾಜ್ಞೆ ಜಾರಿ ಮಾಡಿದ ಅವಧಿಯಲ್ಲಿ 5 ಜನ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ, ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಅವಕಾಶವಿರುವುದಿಲ್ಲ ಎಂದಿದ್ದಾರೆ.

ಯಾವುದೇ ಮೆರವಣಿಗೆ, ಸಭೆ, ಸಮಾರಂಭಗಳು, ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶ ನಡೆಸುವಂತಿಲ್ಲ. ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ. ಯಾವುದೇ ವಿನಾಶಕಾರಿ ವಸ್ತು ಇಲ್ಲವೇ ಸ್ಪೋಟಕವಸ್ತು ಒಯ್ಯತಕ್ಕುದ್ದಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕಲ್ಲು ಅಥವಾ ಎಸೆಯುವ ವಸ್ತುಗಳ ಅಥವಾ ವಸ್ತುಗಳನ್ನು ಅಥವಾ ಚಲಿಸುವ ಅಸ್ತ್ರಗಳನ್ನು ಸಂಗ್ರಹಿಸುವುದನ್ನು, ತಯಾರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ನಿಷೇಧಿಸಿರುವ ಮಾರಕಾಸ್ತ್ರ, ಸ್ಪೋಟಕ ವಸ್ತುಗಳನ್ನು, ಬಂದೂಕುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಅಂತಹ ವ್ಯಕ್ತಿಯ ಬಳಿಯಲ್ಲಿರುವ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು
ಹಾಕಿಕೊಳ್ಳಲಾಗುವುದು. ಅಣುಕು ಶವಗಳ ಪ್ರದರ್ಶನ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು, ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ನಿಷೇಧಿಸಲಾಗಿದೆ. ಬಹಿರಂಗವಾಗಿ ಘೋಷಣೆ ಕೂಗುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಕೃತ್ಯಗಳನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದಾತ್ಮಕವಾಗಿ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡುಗುವುದನ್ನು ನಿಷೇಧಿಸಲಾಗಿದೆ.
ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾ.ದಂ.ಸಂ.ಕಲಂ 188ರನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ನಿಷೇಧಾಜ್ಞೆಯು ಸದುದ್ದೇಶದ ಕಾರ್ಯಗಳಾದ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಪ್ರಾರ್ಥನೆಗೆ ತೆರುಳುವವರಿಗೆ ಹಾಗೂ ಇನ್ನಿತರ ಸಮಾರಂಭಗಳನ್ನು ನಡೆಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement