Published
8 months agoon
By
Akkare Newsಕಡಬ : ಮದುವೆ ಮಂಟಪದಲ್ಲಿ ಕೊನೆ ಕ್ಷಣದಲ್ಲಿ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.
ಕೊಣಾಲು ಗ್ರಾಮದ ಉಮೇಶ ಅವರ ವಿವಾಹವು ಬಂಟ್ವಾಳ ತಾಲೂಕು ಕುಳದ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ.26ರ ಬೆಳಗ್ಗೆ 11.35ರ ಮುಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಿಗದಿಯಾಗಿದ್ದು, ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು. ದಾರೆ ಸೀರೆ ಹಾಗೂ ಶೃಂಗಾರದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದ ವಧು ಸರಸ್ವತಿ ಹಾಗೂ ವರ ಉಮೇಶ ಪರಸ್ಪರ ಹೂಮಾಲೆ ಹಾಕಿಸಿಕೊಂಡಿದ್ದರು.
ಇನ್ನು ವರ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ. ಇದರಿಂದ ಎರಡೂ ಕಡೆಯವರೂ ವಿಚಲಿತಗೊಂಡು ಈ ವೇಳೆ ಹಿರಿಯರು ವಧುವಿನ ಮನವೊಲಿಕೆಗೆ ಮುಂದಾದರೂ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿರುವುದರಿಂದ ಬಳಿಕ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.
ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ಆಗಿರುವ ಅಚಾತುರ್ಯಕ್ಕೆ ಪಶ್ಚಾತ್ತಾಪ ಪಟ್ಟು ಉಮೇಶ ಅವರನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದರು. ಆದರೆ ಆಗ ವರ ಉಮೇಶ್ ಅವರು ಮದುವೆಯಾಗಲು ನಿರಾಕರಿಸಿದರು. ಇದರಿಂದಾಗಿ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.