ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಪ್ರತಿಕೂಲ ಹವಾಮಾನದ ಎಫೆಕ್ಟ್: ಗೇರು, ಮಾವು ಇಳುವರಿಯಲ್ಲಿ ಭಾರೀ ಕುಸಿತ: ಕಂಗಾಲಾದ ಬೆಳೆಗಾರರು ವಿಶೇಷ ವರದಿ: ಕೃಷ್ಣ ಎನ್ ಅಜೆಕಾರ

Published

on

ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಗೇರು ಹಾಗೂ ಮಾವಿನ ಫಸಲು ಈ ಬಾರಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಹವಾಮಾನ ವೈಪರೀತ್ಯ, ಅತಿಯಾದ ಉಷ್ಣಾಂಶದ ಪರಿಣಾಮವಾಗಿ ನಿರ್ದಿಷ್ಟ ಕಾಲದಲ್ಲಿ ಹೂವು ಬಿಡಬೇಕಿದ್ದ ಗೇರು ಹಾಗೂ ಮಾವಿನ ಮರದಲ್ಲಿ ಈ ಬಾರಿ ಫೆಬ್ರವರಿ ತಿಂಗಳ ಬಳಿಕ ಅಲ್ಪಸ್ವಲ್ಪ ಹೂವು ಬಿಟ್ಟು ಈಗ ಕೊಯ್ಲಿಗೆ ಬರುವ ಹಂತ ತಲುಪಿದೆ. ಹವಾಮಾನ ವೈಪರೀತ್ಯದಿಂದ ಗೇರು, ಮಾವು ಕೃಷಿಯನ್ನೇ ನಂಬಿಕೊAಡ ರೈತ ಫಸಲು ನಷ್ಟದಿಂದ ಕಂಗಾಲಾದ್ದಾನೆ.

ಸಾಮಾನ್ಯವಾಗಿ ಗೇರು ಮರಗಳು ಸರಿಯಾಗಿ ಚಿಗುರಬೇಕಿದ್ದರೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಚಳಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಬಾರಿ ಚಳಿಯ ಪ್ರಮಾಣವು ತೀವೃ ಇಳಿಮುಖವಾಗಿ ಉಷ್ಣಾಂಶದಲ್ಲಿ ಏರಿಕೆಯಾಗಿ ಗೇರು ಮರಗಳು ಸರಿಯಾಗಿ ಚಿಗುರದೇ ಹೂವನ್ನೇ ಬಿಟ್ಟಿಲ್ಲ. ಹವಾಮಾನದ ವ್ಯತ್ಯಾಸದ ನಡುವೆಯೂ ಒಂದಷ್ಟು ಮರಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಹೂವು ಬಿಟ್ಟು ಕಾಯಿ ಕಚ್ಚಿದ ಪರಿಣಾಮವಾಗಿ ಫೆಬ್ರವರಿ ತಿಂಗಳಿನಲ್ಲಿ ಬರವೇಕಿದ್ದ ಗೇರು ಹಾಗೂ ಮಾವಿನ ಫಸಲು ಈ ಬಾರಿ ಮೇ ತಿಂಗಳಿನಲ್ಲಿ ಶುರುವಾಗಿದೆ.




 

ಹವಾಮಾನ ವೈಪರೀತ್ಯ ಹಾಗೂ ಉಷ್ಣಾಂಶದಲ್ಲಿ ಏರಿಕೆಯಿಂದ ಫಸಲು ನಷ್ಟ: ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ

ಸಾಮಾನ್ಯವಾಗಿ ತೋಟಗಾರಿಕಾ ಬೆಳೆಗಳಾದ ಗೇರು, ಮಾವು ಹಲಸು ಮುಂತಾದ ಬೆಳೆಗಳಿಗೆ ನಿಗದಿತ ಕಾಲದಲ್ಲಿ ಸಮಪ್ರಮಾಣದ ಚಳಿ ಹಾಗೂ ಬಿಸಿಲು ಬಿದ್ದಾಗ ಮರಗಳು ಚಿಗುರಿ ಉತ್ತಮ ಇಳುವರಿ ಪಡೆಯಲು ಸಾಧ್ಯ, ಆದರೆ ಈ ವರ್ಷ ಹವಾಮಾನದಲ್ಲಿ ಏರಿಳಿಕೆಯಾದ ಪರಿಣಾಮ ಹಾಗೂ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಫಸಲಿನಲ್ಲಿ ತೀವೃ ಕುಸಿತ ಕಂಡಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ನಷ್ಟವಾಗಲಿದೆ. ಇದನ್ನು ತಪ್ಪಿಸಲು ರೈತರು ಸಾಧ್ಯವಾದಷ್ಟು ಮಟ್ಟಿಗೆ ಮಿಶ್ರ ಕೃಷಿಯನ್ನು ಮಾಡಿದ್ದಲ್ಲಿ ಆರ್ಥಿಕ ನಷ್ಟ ತಪ್ಪಿಸಬಹುದಾಗಿದೆ ಎಂದು ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ಬಿ.ವಿ ಸಲಹೆ ನೀಡಿದ್ದಾರೆ

ಇಳುವರಿಯೂ ಕುಂಠಿತ ಬೆಲೆಯಲ್ಲೂ ಇಳಿಕೆ! Ki

ಪ್ರಮುಖ ತೋಟಗಾರಿಕಾ ಬೆಳೆಯಾಗಿರುವ ಗೇರುಬೀಜ ಫಸಲಿನಲ್ಲಿ ತೀವೃ ಇಳಿಮುಖವಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಕಚ್ಚಾ ಗೇರುಬೀಜ ಪೂರೈಕೆ ಇಲ್ಲದಿದ್ದರೂ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಪ್ರಸ್ತುತ ಕೆಜಿ ಗೇರುಬೀಜಕ್ಕೆ 100 ರೂ ಧಾರಣೆಯಿದ್ದು, ಇದರಲ್ಲಿ ಶೇ 70 ರಷ್ಟು ಉತ್ಪಾದನಾ ವೆಚ್ಚ ಹಾಗೂ ಕೂಲಿ ವೆಚ್ಚದಿಂದ ಗೇರು ಕೃಷಿ ನಷ್ಟದತ್ತ ಮುಖ ಮಾಡಿದೆ. ಇದಲ್ಲದೇ ವಿದೇಶದಿಂದ ಕಚ್ಚಾ ಗೇರುಬೀಜ ಆಮದಾಗುತ್ತಿದ್ದು ಇದೂ ಕೂಡ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ. ಈ ಎಲ್ಲಾ ಕಾರಣದಿಂದ ಕೃಷಿಕರು ಬಹುತೇಕ ಗೇರು ತೋಟಗಳನ್ನು ತೆಗೆದು ಅಡಿಕೆ ಬೆಳೆಯತ್ತ ಮುಖ ಮಾಡಿದ್ದು ಮುಂದಿನ ದಿನಗಳಲ್ಲಿ ಗೇರುಬೆಳೆ ಮತ್ತಷ್ಟು ಕುಸಿತವಾದರೂ ಅಚ್ಚರಿಯಿಲ್ಲ. ಇನ್ನು ಮಾವು ಕೃಷಿಯ ವಿಚಾರದಲ್ಲಿ ಅಧಿಕ ಫಸಲು ಕೊಡುವ ತಳಿಗಳು ಇದ್ದರೂ ಹವಾಮಾನದ ವೈಪರೀತ್ಯದಿಂದ ಕೃಷಿಕರು ಏನೂ ಮಾಡಲಾಗದ ಪರಿಸ್ಥಿತಿಯಿದೆ. ಸಾಕಷ್ಟು ಚಳಿಯ ಪ್ರಮಾಣದ ಜತೆಗೆ ಉತ್ತಮ ಬಿಸಿಲಿನ ವಾತಾವರಣವಿದ್ದಲ್ಲಿ ಉತ್ತಮ ಫಸಲನ್ನು ನೀರಿಕ್ಷಿಸಬಹುದಾಗಿದೆ. ಗೇರು ಕೃಷಿಗಿಂತ ಮಾವು ಕೃಷಿ ನಿರ್ವಹಣೆ ಸುಲಭವಾಗಿರುವು ಹಿನ್ನಲೆಯಲ್ಲಿ ಗೇರು ಬೆಳೆಯ ಜಾಗವನ್ನು ಮಾವು ಆಕ್ರಮಿಸಿದೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಕೃಷಿಕರು ಮಿಶ್ರ ಬೆಳೆ ಅಥವಾ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಕೃಷಿಯಿಂದ ಲಾಭ ಪಡೆಯಲು ಸಾಧ್ಯವಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement