Published
7 months agoon
By
Akkare Newsಮಳೆಯಾದ ತಕ್ಷಣವೇ ಡೆಂಗ್ಯು ಜ್ವರದ ಭೀತಿ ಇದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮಳೆಗಾಲದಲ್ಲಿ ಡೆಂಗ್ಯು, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಇಲಾಖೆಯು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (ಡಿಹೆಚ್ಒ) ಮತ್ತು ರೋಗ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆಗಳು ನಡೆಸುವುದರ ಮೂಲಕ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಮನೆ-ಮನೆಗೆ ಭೇಟಿ ನೀಡುವುದು, ಜಿಲ್ಲಾ ಆಸ್ಪತ್ರೆಗಳಲ್ಲಿ ದೃಢಪಟ್ಟ ಡೆಂಗ್ಯು ಪ್ರಕರಣಗಳ ಮೇಲ್ವಿಚಾರಣೆ, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳು ಮತ್ತು ಪರೀಕ್ಷಾ ಕಿಟ್‌ಗಳು ಮತ್ತು ಚಿಕಿತ್ಸಾ ಔಷಧಿಗಳ ಲಭ್ಯತೆಯನ್ನು ಪರೀಶೀಲನೆ ನಡೆಸಲಾಗುತ್ತಿದೆ.
ಈ ಡೆಂಗ್ಯು ಜ್ವರವೂ ವಿಶೇಷವಾಗಿ ಈಡಿಸ್ ಎಂಬ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುತ್ತದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿ ನಂತರ ಸೋಂಕಿಲ್ಲದ ವ್ಯಕ್ತಿಯನ್ನು ಕಚ್ಚಿದಾಗ ಈ ಕಾಯಿಲೆಯು ಬರುತ್ತದೆ. ಇದು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.
ಡೆಂಗ್ಯು ರೋಗ ಲಕ್ಷಣಗಳು: ಮೈಬಿಸಿ (ತಾಪಮಾನ) ಹೆಚ್ಚಾಗುವುದು, ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು, ದದ್ದು ಮತ್ತು ಕೆಲವು ಸಲ ರಕ್ತಸ್ರಾವ, ವಾಂತಿ ಮತ್ತು ವಾಕರಿಕೆ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಇದು ಡೆಂಘೀ ಹೆಮರಾಜಿಕ್ ಜ್ವರ ಎಂಬ ತೀವ್ರವಾದ ರೂಪಕ್ಕೆ ತಿರುಗಿ ಜೀವಕ್ಕೆ ಅಪಾಯಕಾರಿಯಾಗಬಹುದು.
ಎಚ್ಚರಿಕೆಗಳು: ಡೆಂಗ್ಯುಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ರೋಗಲಕ್ಷಣಗಳ ಬೆಂಬಲ ಮತ್ತು ನಿರ್ವಹಣೆ ಮುಖ್ಯವಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಕಡಿಮೆ ಮಾಡುವುದು ಮತ್ತು ಸೊಳ್ಳೆ ಕಡಿತದಿಂದ ರಕ್ಷಣೆ ಮಾಡಿಕೊಳ್ಳುವುದು ಮಹತ್ವದ ವಿಷಯ. ಡೆಂಗ್ಯು ಜ್ವರದಿಂದ ದೂರ ಉಳಿಯಲು ಸೊಳ್ಳೆ ಕಚ್ಚದಂತೆ ಸದಾ ಎಚ್ಚರವಹಿಸಬೇಕು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಬಹಳ ಉತ್ತಮ. ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಬೇಕು. ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಬೇಕು. ಮನೆ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು