Published
7 months agoon
By
Akkare Newsಎನ್‌ಡಿಎ ಮೈತ್ರಿಕೂಟ ಬಹುಮತ ಗಳಿಸಿದ್ದರೂ, ಅದರ ಮಿತ್ರ ಪಕ್ಷಗಳನ್ನು ಸೆಳೆದುಕೊಂಡು ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಮೈತ್ರಿಕೂಟ ಸರ್ಕಾರ ರಚಿಸುವ ಸಾಧ್ಯತೆಗಳು ಚರ್ಚೆಗೆ ಬಂದಿವೆ. ಈ ಹಿಂದೆ ತಮ್ಮ ಮೈತ್ರಿ ಪಾಲುದಾರರಾಗಿದ್ದ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.ಈ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ನಡೆಯಲಿರುವ ಐಎನ್‌ಡಿಐಎ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ. “ನಾವು ನಾಳೆ ನಮ್ಮ ಪಾಲುದಾರರ ಜತೆ ಸಭೆ ನಡೆಸುತ್ತೇವೆ. ಈ ಪ್ರಶ್ನೆಗಳನ್ನು ಅಲ್ಲಿ ಪ್ರಸ್ತಾಪಿಸಲಾಗುತ್ತದೆ. ನಾವು ನಮ್ಮ ಮಿತ್ರ ಪಕ್ಷಗಳನ್ನು ಗೌರವಿಸುತ್ತೇವೆ. ಹೀಗಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರನ್ನು ಕೇಳದೆ ನಾವು ಮಾಧ್ಯಮದ ಮುಂದೆ ಹೇಳಿಕೆ ನೀಡುವುದಿಲ್ಲ. ಅಲ್ಲಿ ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾವು ನಮ್ಮ ಪಾಲುದಾರರಿಗೆ ಗೌರವ ನೀಡುವುದರೊಂದಿಗೆ ಜತೆಯಾಗಿ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷವು ಸ್ಪಷ್ಟವಾಗಿ ಹಿಂದೂಸ್ತಾನಕ್ಕೆ ಹೊಸ ದೃಷ್ಟಿಕೋನ ನೀಡಿದೆ. ಐಎನ್‌ಡಿಐಎ ಮೈತ್ರಿಕೂಟದ ಈ ಪ್ರದರ್ಶನವು, ಸಂವಿಧಾನದ ಮೇಲಿನ ದಾಳಿಯ ವಿರುದ್ಧದ ಹೋರಾಟ ಪ್ರತೀಕ” ಎಂದರು.
“ಇಂದು ಅದಾನಿಯ ಷೇರುಗಳನ್ನು ನೋಡಿದ್ದೀರಾ? ಎಷ್ಟು ಕುಸಿದಿದೆ. ಜನರು ಮೋದಿ ಅವರ ಆಡಳಿತವನ್ನು ಅದಾನಿ ಜತೆಗೆ ನೇರವಾಗಿ ಸಂಬಂಧಿಸಿದ್ದಾರೆ. ಮೋದಿ ಸೋತರೆ ಅದಾನಿ ಕೂಡ ಕುಸಿಯುತ್ತಾರೆ. ನರೇಂದ್ರ ಮೋದಿ, ಅಮಿತ್ ಶಾ ಅವರು ಈ ದೇಶವನ್ನು ನಡೆಸುವುದನ್ನು ನಾವು ಬಯಸುವುದಿಲ್ಲ ಎಂಬ ದೊಡ್ಡ ಸಂದೇಶವನ್ನು ದೇಶದ ಜನತೆ ನೀಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು