Published
7 months agoon
By
Akkare Newsಮನೆಯ ಮಲಗುವ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಕೊಚ್ಚಿಯ ಅಂಗಮಾಲಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಬಿನೀಶ್ ಕುರಿಯನ್, ಅವರ ಪತ್ನಿ ಅನು, ಮಗಳು ಜೋವನ್(8) ಮತ್ತು ಮಗ ಜೆಸ್ವಿನ್(6) ಎಂದು ಗುರುತಿಸಲಾಗಿದೆ.
ಅಂಗಮಾಲಿ ಕೋರ್ಟ್ ಕಾಂಪ್ಲೆಕ್ಸ್ ಬಳಿಯ ಮನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ನೆರೆಹೊರೆಯವರು, ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮೃತ ಕುಟುಂಬ ಸದಸ್ಯರು ಮಲಗಿದ್ದ ಕೋಣೆಯಿಂದ ಕಪ್ಪು ಹೊಗೆ ಹೊರಹೊಮ್ಮುತ್ತಿತ್ತು. ಬೆಳಗ್ಗೆ 5ರ ಸುಮಾರಿಗೆ ವಾಕಿಂಗ್‌ಗೆ ತೆರಳಿದ್ದ ಜನರು ಗಮನಿಸಿದ್ದು, ಆ ಬಳಿಕ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಅದೃಷ್ಟವಶಾತ್, ಬಿನೀಶ್ ಅವರ ತಾಯಿ ಮನೆಯ ನೆಲಮಹಡಿಯಲ್ಲಿ ವಾಸಿಸುತ್ತಿದ್ದರು. ಆಕೆಯ ಸ್ಥಿತಿ ಸ್ಥಿರವಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಹೊತ್ತಿಗೆ, ಮಹಡಿಯ ಮೇಲಿನ ಇಡೀ ಕೋಣೆ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದ ನಂತರ, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಂಗಮಾಲಿ ಪೊಲೀಸರು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಧಿವಿಜ್ಞಾನ ತಜ್ಞರು ಘಟನಾ ಪ್ರದೇಶವನ್ನು ಪರಿಶೀಲಿಸಿದರು. ಆದರೆ, ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ” ಎಂದು ತಿಳಿಸಿದ್ದಾರೆ.
ಬಿನೀಶ್ ಜಾಯಿಕಾಯಿ ವ್ಯಾಪಾರ ಮಾಡುತ್ತಿದ್ದರು. ಅಂಗಮಾಲಿ ಪಟ್ಟಣದಲ್ಲಿ ಕಿರಾಣಿ ಅಂಗಡಿಯನ್ನೂ ಕೂಡಾ ನಡೆಸುತ್ತಿದ್ದರು. ಜೆಸ್ವಿನ್ ಯುಕೆಜಿ ಮತ್ತು ಜೋವನ್ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.