Published
6 months agoon
By
Akkare Newsಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿ ಕೆ ಶಿವಕುಮಾರ್, “ದರ್ಶನ್ ಪ್ರಕರಣ ಮುಚ್ಚಿ ಹಾಕಲು ನನ್ನನ್ನು ಯಾರೂ ಸಂಪರ್ಕಿಸಿಲ್ಲ” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ದರ್ಶನ್ ಪ್ರಕರಣ ಮುಚ್ಚಿ ಹಾಕಲು ನಿಮ್ಮ ಸಚಿವರು ಯಾರಾದರೂ ಒತ್ತಡ ಹಾಕಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ವಿಚಾರವಾಗಿ ನನ್ನ ಬಳಿ ಯಾರೂ ಮಾತನಾಡಿಲ್ಲ. ನನಗೆ ಅಷ್ಟಾಗಿ ಸಂಪರ್ಕವಿಲ್ಲ. ಸಚಿವರ ಪ್ರಯತ್ನದ ಬಗ್ಗೆ ನಿಮ್ಮಿಂದ ಮಾಹಿತಿ ಬಂದಿದೆ. ಈ ಬಗ್ಗೆ ವಿಚಾರಿಸುತ್ತೇನೆ” ಎಂದರು.
ದರ್ಶನ್ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯನ್ನು ಶಾಮಿಯಾನ ಮೂಲಕ ಮುಚ್ಚಲಾಗಿದೆ. ಈ ಪ್ರಕರಣದಲ್ಲಿ ಸತ್ಯಾಂಶ ಮರೆಮಾಚುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, “ನನ್ನ ಪ್ರಕರಣದ ಅನುಭವದಲ್ಲೇ ಹೇಳುವುದಾದರೆ, ಅಧಿಕಾರಿಗಳು ನನ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವಾಗ ಜನರಿಗೆ ಮರೆಮಾಚಿ ಕರೆದುಕೊಂಡು ಹೋಗುತ್ತಿದ್ದರು. ಕೆಲವು ಬಾರಿ ಅಭಿಮಾನಿಗಳು ಅಡ್ಡ ಬರುವುದು, ಜೈಕಾರ ಕೂಗುವುದು ಅಥವಾ ಯಾರಾದರೂ ಕಲ್ಲು ಎಸೆಯಬಹುದು ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಆ ರೀತಿ ಮಾಡುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರು ಇದೇ ರೀತಿ ಮುನ್ನಚ್ಚರಿಕೆ ಕ್ರಮ ತೆಗೆದುಕೊಂಡಿರಬಹುದು. ಆದರೆ, ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ” ಎಂದರು.
ಪೊಲೀಸರು ಶಾಮಿಯಾನ ಹಾಕಿರುವುದರಿಂದ ಸಾರ್ವಜನಿಕರು ಠಾಣೆಗೆ ಹೋಗಿ ದೂರು ನೀಡಲು ಆಗುತ್ತಿಲ್ಲ ಎಂದಾಗ, “ಈ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಇದೆಲ್ಲವೂ ನನಗೆ ಹೊಸ ಮಾಹಿತಿ. ನಿಮ್ಮಿಂದ ಗೊತ್ತಾಗಿದೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ದರ್ಶನ್ ಪ್ರಕರಣ ರಾಜ್ಯ ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿದರೆ ನಾನು ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂಬ ಕುಮಾರಸ್ವಾಮಿ ಅವರ ಎಚ್ಚರಿಕೆ ಬಗ್ಗೆ ಕೇಳಿದಾಗ, “ಈಗಲೂ ಅವರು ಮಧ್ಯಪ್ರವೇಶಿಸಲಿ. ಯಾರು ಬೇಕಾದರೂ ಮಧ್ಯಪ್ರವೇಶ ಮಾಡಲಿ” ಎಂದರು.