Published
6 months agoon
By
Akkare Newsಪುತ್ತೂರು : ಜಿಲ್ಲೆಯ 6 ಮಂಡಲಗಳಿಗೆ ಚುನಾವಣಾ ಪೂರ್ವದಲ್ಲಿ ಸಾರಥಿಗಳನ್ನು ನೇಮಿಸಿದ್ದ ಬಿಜೆಪಿ ಹೈಕಮಾಂಡ್, ಪುತ್ತೂರು ಗ್ರಾಮಾಂತರ ಹಾಗೂ ನಗರ ಮಂಡಲಗಳನ್ನು ಖಾಲಿ ಬಿಟ್ಟು 3 ತಿಂಗಳು ಕಳೆದಿದೆ. ಹೀಗಾಗಿ ವರ್ಷದ ಹಿಂದೆ ಅಧಿಕಾರಾವಧಿ ಮುಗಿದಿರುವ ಅಧ್ಯಕ್ಷರೇ ಹಂಗಾಮಿಗಳಾಗಿ ಮುದುವರಿದ್ದಾರೆ.
ಲೋಕಸಭಾ ಚುನಾವಣೆ ಮುಗಿದಿರುವ ಕಾರಣ ಇನ್ನಾವುದೇ ಸಂದರ್ಭದಲ್ಲಿ ನೂತನ ಸಾರಥಿಗಳ ಘೋಷಣೆಯಾಗುವ ಸಾಧ್ಯತೆ ಇದೆ. 2 ಮಂಡಲಗಳ ಸಾರಥ್ಯ ವಹಿಸಲು ಕಮಲ ಪಕ್ಷದಲ್ಲಿದೊಡ್ಡ ಮಟ್ಟದ ಲಾಬಿ ಶುರುವಾಗಿದೆ.
ಬಂಡಾಯದ ಬಾವುಟ ಕೆಳಗಿಳಿಸಿ ಅರುಣ್ ಕುಮಾರ್ ಪುತ್ತಿಲ ಚುನಾವಣಾ ಪೂರ್ವದಲ್ಲಿ ಬಿಜೆಪಿಗೆ ಸೇರಿದ್ದು, ಅವರಿಗೆ ಗ್ರಾಮಾಂತರ ಮಂಡಲದ ಅಧ್ಯಕ್ಷತೆ ನೀಡಬೇಕೆಂಬ ಬೇಡಿಕೆ ಬಲವಾಗಿದೆ. ಪಕ್ಷ ಸೇರ್ಪಡೆಗೆ ಮೊದಲೇ ಪುತ್ತಿಲ ಪರಿವಾರ ಈ ಷರತ್ತು ವಿಧಿಸಿತ್ತು.ಅವರಿಗಾಗಿಯೇ ಕಾದಿರಿಸಲಾಗಿದೆಯೋ ಎಂಬರ್ಥ ಬರುವ ರೀತಿಯಲ್ಲಿ ಪುತ್ತೂರು ಮಂಡಲ ಅಧ್ಯಕ್ಷತೆಯನ್ನು ಹೈಕಮಾಂಡ್ ಖಾಲಿ ಬಿಟ್ಟಿತ್ತು. ಹೀಗಾಗಿ ಸಾಜ ರಾಧಾಕೃಷ್ಣ ಆಳ್ವ ಮತ್ತು ಪಿ.ಜಿ.ಜಗನ್ನಿವಾಸ ರಾವ್ ಅವರೇ ಗ್ರಾಮಾಂತರ- ನಗರ ಅಧ್ಯಕ್ಷತೆಯಲ್ಲಿ ಸದ್ಯಕ್ಕೆ ಮುಂದುವರಿದಿದ್ದಾರೆ.
ಪುತ್ತಿಲ ಮರು ಸೇರ್ಪಡೆ ಸಂದರ್ಭ ಪುತ್ತೂರು ಬಿಜೆಪಿಯಲ್ಲಿ ಹೈಡ್ರಾಮಾ ನಡೆದಿತ್ತು. ಸ್ಥಾನಮಾನ ನೀಡದೆ ನಿಶ್ಯರ್ತ ಸೇರಿಸಬೇಕೆಂದು ಪ್ರಭಾವಿ ತಲೆಗಳು ವಾದಿಸಿದ್ದವು. ಕೊನೆಗೂ ಜಿಲ್ಲಾಧ್ಯಕ್ಷರ ಮಧ್ಯಸ್ಥಿಕೆ ಮತ್ತು ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಮೇಲ್ನೋಟಕ್ಕೆ ನಿಶ್ಯರ್ತ ಎನ್ನುವ ರೀತಿಯಲ್ಲಿ ಪುತ್ತಿಲ ಬಿಜೆಪಿ ಸೇರಿದ್ದರು.
ವಿಶೇಷವೆಂದರೆ ಒಂದು ವರ್ಗದಲ್ಲಿಈಗಲೂ ಪುತ್ತಿಲ ಸ್ಥಾನಮಾನಕ್ಕೆ ಪ್ರಬಲ ವಿರೋಧವಿದೆ. ಅದಕ್ಕಾಗಿ ಅವರು ಇತರ ಅನೇಕರನ್ನು ಬಿಂಬಿಸಲು ಶುರುವಿಟ್ಟಿದ್ದಾರೆ. ಮಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಆಸೆಯಲ್ಲಿರುವ ಕೆಲವರು ತಮ್ಮದೇ ಲೆಕ್ಕಾಚಾರ ಇಟ್ಟುಕೊಂಡು ಪುತ್ತಿಲ ಸ್ಥಾನಮಾನ ವಿರೋಧಿಸುತ್ತಿದ್ದಾರೆ.
ಈ ಮಧ್ಯೆ, ಉಭಯ ಮಂಡಲಾಧ್ಯಕ್ಷತೆ ಪಡೆಯಲು ಇನ್ನೂ ಅನೇಕ ನಾಯಕರು ಲಾಬಿ ನಡೆಸುತ್ತಿದ್ದಾರೆ. ಪುತ್ತಿಲರಿಗೆ ಅಧ್ಯಕ್ಷತೆ ಕೊಟ್ಟರೆ ಒಂದು ಸಮಸ್ಯೆ, ಕೊಡದಿದ್ದರೆ ಇನ್ನೊಂದು ಸಮಸ್ಯೆ ಎಂಬ ಸ್ಥಿತಿ ಇಲ್ಲಿದೆ. ಈ ಸಮಸ್ಯೆಗೆ ಬಿಜೆಪಿ ಹೈಕಮಾಂಡ್ ಯಾವ ರೀತಿ ಮದ್ದು ಅರೆಯುತ್ತದೆ ಎಂಬ ಕುತೂಹಲ ಮೂಡಿದೆ.
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪುತ್ತೂರು ಮಂಡಲದ ಅಧ್ಯಕ್ಷರು ಜಿಲ್ಲಾಧ್ಯಕ್ಷರಿಗೆ ವರದಿ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ. ಸದ್ಯಕ್ಕೆ ಹುದ್ದೆಯಲ್ಲಿ ಮುಂದುವರಿಯಿರಿ ಎಂಬ ಉತ್ತರವಷ್ಟೇ ಜಿಲ್ಲಾಧ್ಯಕ್ಷರಿಂದ ಸಿಕ್ಕಿದೆ. ಚುನಾವಣಾ ಪೂರ್ವದಲ್ಲಿಇತರ ಮಂಡಲಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತೇ ಹೊರತು ಆಯ್ಕೆ ಪ್ರಕ್ರಿಯೆ ಮಾಡಿರಲಿಲ್ಲ. ಪುತ್ತೂರು ಮಂಡಲಕ್ಕೆ ಮಾತ್ರ ಆಯ್ಕೆ ಪ್ರಕ್ರಿಯೆ ಮಾಡುವ ಸಾಧ್ಯತೆ ಕಡಿಮೆ ಇದ್ದು, ಹೈಕಮಾಂಡ್ ಮಟ್ಟದಿಂದ ನೇಮಕ ಆಗುವ ಸಾಧ್ಯತೆಯೇ ಅಧಿಕವಾಗಿದೆ.