ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ಪಪ್ಪಾಯಿ, ಕಿವಿ ಹಣ್ಣು ಮತ್ತು ಡ್ರಾಗನ್ ಫ್ರೂಟ್‌ಗಳಿಂದ ಡೆಂಗ್ಯೂ ಗುಣಪಡಿಸಲು ಸಾಧ್ಯವೇ?

Published

on

ಮಳೆಗಾಲ ಬಂತೆಂದರೆ ಡೆಂಗಿ ಪ್ರಕಾರಣಗಳು ಹೆಚ್ಚಾಗುತ್ತವೆ, ಈಗ ಕರ್ನಾಟಕದಲ್ಲಿ ಡೆಂಗಿ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಡೆಂಗಿ ಜ್ವರವು ವೈರಸ್‌ನಿಂದ ಬರುವ ಖಾಯಿಲೆ. ಮೈಮೇಲೆ ಪಟ್ಟಿ ಇರುವ ‘ಹುಲಿ ಸೊಳ್ಳೆ’ ಏಡಿಸ್ ಇಜಿಪ್ಟೈ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಡೆಂಗಿ ಖಾಯಿಲೆಗೆ ಪಪ್ಪಾಯಿ ಎಲೆಯ ರಸ ಸೇವಿಸುವುದರಿಂದ ಡೆಂಗಿ ನಿವಾರಣೆಯಾಗುತ್ತದೆ ಎಂಬ ಪೋಸ್ಟ್‌ರ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

 

ಮಳೆಗಾಲ ಪ್ರಾರಂಭವಾಗಿದ್ದು, ಭಾರತದಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಕಡೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಮುಂಗಾರು ಆರಂಭದ ನಂತರ ಹಲವು ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣಗೊಂಡಿವೆ. ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 5 ರಂದು ಗಗನ್ ಎಂಬ 11 ವರ್ಷದ ಬಾಲಕ ಡೆಂಗ್ಯೂ ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಇದಕ್ಕೂ ಮುನ್ನ ಜೂನ್ 28 ರಂದು ಕಗ್ಗದಾಸಪುರದ ಅಭಿಲಾಷ್ ಎಂಬ 27 ವರ್ಷದ ವ್ಯಕ್ತಿ ಡೆಂಗ್ಯೂನಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು ಏಳು ಡೆಂಗ್ಯೂ ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕರ್ನಾಟಕದಲ್ಲಿಯೇ ಏಳು ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಕೆಳಗಿನ ಮಾಹಿತಿ ನೀಡಲಾಗಿದೆ. “ತುರ್ತು ಮಾಹಿತಿ.. ಪಪ್ಪಾಯಿ ಎಲೆಯ ರಸವು ಜೇನು ತುಪ್ಪದೊಂದಿಗೆ ಪವಾಡದಂತೆ ಕೆಲಸ ಮಾಡುತ್ತದೆ. ಪ್ಲೆಟ್ಲೆಟ್‌ ಎಣಿಕೆ 12 ಗಂಟೆಗಳಲ್ಲಿ 68,000 ದಿಂದ 200000 ದವರೆಗೆ ಏರುತ್ತದೆ. ಮಾನವೀಯತೆಯ ಸೇವೆ ಮಾಡಲು ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ.. ಭಾರತದಾದ್ಯಂತ ಡೆಂಗ್ಯ ಜ್ವರ ವಿಪರೀತವಾಗಿ ಹರಡುತ್ತಿದೆ. ದಯವಿಟ್ಟು ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ, ಹಲವಾರು ಜೀವಗಳನ್ನು ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ ” ಎಂದು ಬರೆಯಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಡೆಂಗಿ ಖಾಯಿಲೆಗೆ ಪಪ್ಪಾಯಿ ಎಲೆಯ ರಸವನ್ನು ಔಷಧಿಯನ್ನಾಗಿ ಬಳಸಲು ವೈದ್ಯರು ಶಿಫಾರಸ್ಸು ಮಾಡಿದ್ದಾರೆಯೇ ಎಂದು ಪರಿಶೀಲಿಸಲು ಸರ್ಚ್ ಮಾಡಿದಾಗ, ನಿಮ್ಮಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದರೆ ಎಂದಿಗೂ ಪಪ್ಪಾಯಿ ಎಲೆಗಳನ್ನು ಸೇವಿಸಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂದು ಡಾ ರಾಕೇಶ್ ಕುಮಾರ್ ಎಚ್ಚರಿಸುತ್ತಾರೆ.

 

ಡೆಂಗ್ಯೂ ಒಂದು ವೈರಲ್ ಸೋಂಕು, ಇದು ಸೊಳ್ಳೆಗಳಿಂದ ಜನರಿಗೆ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನದಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಹೆಚ್ಚಿನ ಜನರು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಜ್ವರ, ತಲೆನೋವು, ಮೈ ಕೈ ನೋವು, ವಾಕರಿಕೆ ಮತ್ತು ದದ್ದುಗಳು ಇದರ ಸಾಮಾನ್ಯ ಲಕ್ಷಣಗಳಾಗಿವೆ.

ಡೆಂಗ್ಯೂಗೆ ಪಪ್ಪಾಯಿ ಎಲೆ ಸಹಕಾರಿಯೇ?

ಪ್ರತಿ ವರ್ಷ, ಡೆಂಗ್ಯೂ ಪ್ರಕರಣಗಳ ಹೆಚ್ಚಳವು ಪಪ್ಪಾಯಿ ಎಲೆಗಳ ಬೇಡಿಕೆಯ ಉಲ್ಬಣಕ್ಕೆ ಕಾರಣವಾಗುತ್ತದೆ ಏಕೆಂದರೆ ಅವುಗಳು ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಆದರೆ ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.  ಹಲವು ಕಾರಣಗಳಿಂದ ಡೆಂಗ್ಯೂನಿಂದ ಬಳಲುತ್ತಿರುವಾಗ ಪಪ್ಪಾಯಿ ಎಲೆಗಳನ್ನು ಸೇವಿಸಬಾರದು. ಮೊದಲನೆಯದಾಗಿ, ಪಪ್ಪಾಯಿ ಎಲೆಗಳು ಡೆಂಗ್ಯೂ ರೋಗಿಗಳಿಗೆ ಚಿಕಿತ್ಸಕ ಪ್ರಯೋಜನಗಳನ್ನು ಹೊಂದಿವೆ ಎಂಬ ಸಮರ್ಥನೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಅಲ್ಲದೆ ಡೆಂಗ್ಯೂ ಖಾಯಿಲೆಗೆ, ಪಪ್ಪಾಯಿ ಎಲೆಯ ರಸವಾಗಲಿ, ಡ್ರಾಗನ್ ಫ್ರೂಟ್‌ ಆಗಲಿ ಅಥವಾ ಕಿವಿ ಹಣ್ಣು ಮದ್ದು ಎಂದು ವೈದ್ಯಕೀಯ ಸಂಶೋದನೆಗಳು ದೃಢಪಡಿಸಿಲ್ಲ ಎಂದು ಬೂಮ್ ವರದಿ ಮಾಡಿದೆ.

29 ಸೆಪ್ಟಂಬರ್‌ 2023 ರಂದು ಅನ್‌ಲೈನ್‌ ಸುದ್ದಿತಾಣ ಬೂಮ್‌ ಪ್ರಕಟಿಸಿದ Dragonfruit To Papaya Leaves: Common Dengue Myths Debunked ಎಂಬ ವರದಿಯೊಂದನ್ನು ಪ್ರಕಟಿಸಿದೆ.  ಈ ವರದಿಯಲ್ಲಿ ಡ್ರ್ಯಾಗನ್‌ಪ್ರೂಟ್‌, ಪಪ್ಪಾಯಿ ಎಲೆ, ಹೆಚ್ಚು ನೀರು ಕುಡಿಯುವುದರಿಂದ ಡೆಂಗ್ಯು ನಿವಾರಣೆ ಆಗುತ್ತದೆ ಎಂಬ ಸುಳ್ಳು ಸುದ್ದಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿತ್ತು. 

ಮಳೆಯೊಂದಿಗೆ ಅಪೂರ್ಣ ರಸ್ತೆ ಕಾಮಗಾರಿ ಮತ್ತು ಫ್ಲೈಓವರ್ಗಳು ಮತ್ತು ಅಂಡರ್‌ ಪಾಸ್‌ ಗಳ ನಿರ್ಮಾಣವು ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳವನ್ನು ಹೆಚ್ಚಿಸುತ್ತಿದೆ. ತಾತ್ತ್ವಿಕವಾಗಿ, ನಾಗರಿಕ ಸಂಸ್ಥೆಗಳು ಬೇಸಿಗೆಯಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಬೇಕಾಗಿತ್ತು, ಆದರೆ ಅವು ಇನ್ನೂ ಬಾಕಿ ಉಳಿದಿವೆ.. ಇತ್ತೀಚಿನ ದಿನಗಳಲ್ಲಿ ಅನೇಕ ಮಕ್ಕಳು ಡೆಂಗ್ಯೂಗೆ ಬಲಿಯಾಗುತ್ತಿದ್ದಾರೆ. ಮಕ್ಕಳನ್ನು ಸೋಂಕಿನಿಂದ ರಕ್ಷಿಸುವ ಮಾರ್ಗಗಳನ್ನು ಗುರುತಿಸಲು ಶಾಲಾ ಆಡಳಿತ ಮಂಡಳಿ ಸಭೆ ನಡೆಸಬೇಕು. ಸೋಂಕುಗಳು ಜಟಿಲವಾದರೆ ಡೆಂಗ್ಯೂಗೆ ಯಾವುದೇ ಚಿಕಿತ್ಸೆ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಇದು ಸಾವಿಗೆ ಕಾರಣವಾಗುತ್ತದೆ” ಎನ್ನುವುದು ಡಾ.ಮಂಜುನಾಥ್‌ ವಿವರಣೆ.

 

ಗುರುಗ್ರಾಮ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ಡಾ. ತುಷಾರ್ ತಯಾಲ್ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ನೀಡಿರುವ ಸಂದರ್ಶನದಲ್ಲಿ ಪಪ್ಪಾಯಿ ಎಲೆಗಳನ್ನು ಸೇವಿಸುವುದರಿಂದ ಪ್ರತಿಕೂಲ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಇದಲ್ಲದೇ ಅಲರ್ಜಿಯ ಪ್ರತಿಕ್ರಿಯೆಗಳು, ಜಠರಗರುಳಿನ ಅಸ್ವಸ್ಥತೆ ಅಥವಾ ಇತರ ತೊಡಕುಗಳಿಗೆ ಕಾರಣವಾಗಬಹುದು. ಡೆಂಗ್ಯೂ ರೋಗಿಗಳಿಗೆ ಉತ್ತಮ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ವೃತ್ತಿಪರ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಮತ್ತು ವೈದ್ಯಕೀಯ ಸಲಹೆಯನ್ನು ಅನುಸರಿಸುವುದು ಅತ್ಯಗತ್ಯ. ಪಪ್ಪಾಯಿ ಎಲೆಗಳಂತಹ ಸಾಬೀತಾಗದ ಪರಿಹಾರಗಳನ್ನು ಅವಲಂಬಿಸುವ ಬದಲು ಸೂಕ್ತವಾದ ಚಿಕಿತ್ಸೆಗಳಿಗಾಗಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಸೂಕ್ತವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ಡೆಂಗ್ಯೂ ಲಕ್ಷಣಗಳೇನು?

ತಜ್ಞರ ಪ್ರಕಾರ, ಡೆಂಗ್ಯೂ ಹೊಂದಿರುವ ಹೆಚ್ಚಿನ ಜನರು ಸೌಮ್ಯ ಅಥವಾ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಮತ್ತು 1-2 ವಾರಗಳಲ್ಲಿ ಗುಣಮುಖರಾಗುತ್ತಾರೆ. ಕೆಲವು ಅಪರೂಪದ ಸಂದರ್ಭಗಳಲ್ಲಿ, ಡೆಂಗ್ಯೂ ತೀವ್ರವಾಗಿರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು. ರೋಗಲಕ್ಷಣಗಳು ಕಂಡುಬಂದರೆ, ಅವು ಸಾಮಾನ್ಯವಾಗಿ ಸೋಂಕಿನ 4-10 ದಿನಗಳ ನಂತರ ಪ್ರಾರಂಭವಾಗುತ್ತದೆ ಮತ್ತು 2-7 ದಿನಗಳವರೆಗೆ ಇರುತ್ತದೆ.

  • ವಿಪರೀತ  ಜ್ವರ
  • ತೀವ್ರ ತಲೆನೋವು
  • ಕಣ್ಣು ನೋವು
  • ಸ್ನಾಯು ಮತ್ತು ಕೀಲು ನೋವು
  • ವಾಕರಿಕೆ, ವಾಂತಿ
  • ಊದಿಕೊಂಡ ಗ್ರಂಥಿಗಳು
  • ದದ್ದು.

ಒಟ್ಟಾರೆಯಾಗಿ ಹೇಳುವುದಾದರೆ, ಡೆಂಗ್ಯೂ ಖಾಯಿಲೆಗೆ ಪಪ್ಪಾಯಿ ರಸ, ಕಿವಿ ಹಣ್ಣು ಅಥವಾ ಡ್ರಾಗನ್ ಫ್ರೂಟ್‌ ಪರಿಹಾರವಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಇಂತಹ ಅವೈಜ್ಞಾನಿಕ ಮಾರ್ಗೋಪಾಯಗಳನ್ನು ಅವಲಂಭಿಸದೆ ರೋಗ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.

Continue Reading
Click to comment

Leave a Reply

Your email address will not be published. Required fields are marked *

Advertisement