ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಗ್ರಾಹಕನಿಂದ ಸಾಲದ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ…ಬಜಾಜ್ ಫೈನಾನ್ಸ್ ಕಂಪೆನಿ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗ ತೀರ್ಪು

Published

on

ಗ್ರಾಹಕರೊಬ್ಬರಿಗೆ ಟಿ.ವಿ. ಖರೀದಿಸಲು ನೀಡಿದ್ದ ಸಾಲದ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ ಬಜಾಜ್ ಫೈನಾನ್ಸ್ ಕಂಪೆನಿಯ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ. ಬಜಾಜ್ ಫೈನಾನ್ಸ್ ಕಂಪೆನಿಯು ಗ್ರಾಹಕರಾದ ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿ ಡಿ.ಎಂ. ಮಂಜುನಾಥ್ ರವರಿಂದ ಸಾಲದ ಹಣಕ್ಕಿಂತ ಹೆಚ್ಚುವರಿಯಾಗಿ ಪಡೆದಿದ್ದ ರೂ. 18831 ಹಣವನ್ನು ಬಡ್ಡಿ ಸಹಿತವಾಗಿ ಮತ್ತು ರೂ. 5 ಸಾವಿರವನ್ನು ಸೇವಾ ನ್ಯೂನತೆಗೆ ಹಾಗೂ ರೂ. 5 ಸಾವಿರವನ್ನು ವ್ಯಾಜ್ಯದ ಖರ್ಚಿಗೆ ನೀಡುವಂತೆ ಆಯೋಗದ ಅಧ್ಯಕ್ಷರಾದ ಸಿ. ರೇಣುಕಾಂಬ ಮತ್ತು ಸದಸ್ಯರಾದ ಗೌರಮ್ಮಣಿ ಅವರುಗಳು ಆದೇಶಿಸಿದ್ದಾರೆ.

 

ಗ್ರಾಹಕರಾದ ಡಿ.ಎಂ. ಮಂಜುನಾಥ್ ರವರು ದಿನಾಂಕ 02-04-2023 ರಂದು ಬಜಾಜ್ ಫೈನಾನ್ಸ್ ಕಂಪೆನಿಯಿಂದ ರೂ. 67,167 ಸಾಲ ಪಡೆದು ಸುಂಟಿಕೊಪ್ಪ ಚಿದು ಎಂಟರ್ ಪ್ರೈಸಸ್ ನಿಂದ 65 ಇಂಚಿನ ಎಲ್.ಇ.ಡಿ. ಟಿವಿ ಯನ್ನು ಖರೀದಿಸಿದ್ದರು. ಇದಕ್ಕಾಗಿ ರೂ. 25,000 ನ್ನು ಮುಂಗಡವಾಗಿ ಪಾವತಿಸಿದ್ದರು. ಈ ಮುಂಗಡ ಹಣವನ್ನು ಕಳೆದು ಉಳಿಕೆ ಹಣವನ್ನು ಮಾಸಿಕ ಕಂತಿನ ರೂಪದಲ್ಲಿ ರೂ. 5598 ರಂತೆ ಒಟ್ಟು 8 ತಿಂಗಳಲ್ಲಿ ಪಾವತಿಸಬೇಕಾಗಿತ್ತು. ಆದರೆ ಬಜಾಜ್ ಫೈನಾನ್ಸ್ ಕಂಪೆನಿಯು ಬೇರೆ ಬೇರೆ ಕಾರಣಗಳನ್ನು ನೀಡಿ ಕಂತಿನ ಹಣದೊಂದಿಗೆ ಹೆಚ್ಚುವರಿಯಾಗಿ ರೂ. 18831.80 ನ್ನು ಮಂಜುನಾಥ್ ರವರು ಸುಂಟಿಕೊಪ್ಪ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ವರ್ಗಾಯಿಸಿಕೊಂಡಿದ್ದರು.

ಸಾಲದ ಹಣವನ್ನು ಪೂರ್ತಿಯಾಗಿ ಪಾವತಿಸಿದ್ದರಿಂದ, ಕುಶಾಲನಗರದಲ್ಲಿರುವ ಬಜಾಜ್ ಫೈನಾನ್ಸ್ ಕಂಪೆನಿಯ ಕಛೇರಿಗೆ ತೆರಳಿ ಎನ್.ಓ.ಸಿ. ಕೇಳಿದಾಗ ಇನ್ನೂ ಒಂದು ರೂಪಾಯಿ ಬಾಕಿ ಉಳಿದಿದ್ದು, ಅದನ್ನು ಕಟ್ಟಿದರೆ ಮಾತ್ರ ಎನ್.ಓ.ಸಿ ಕೊಡುವುದಾಗಿ ತಿಳಿಸಿದ್ದರು. ಸಾಲದ ಪೂರ್ತಿ ಹಣವನ್ನು ಪಾವತಿಸಿದ್ದರೂ ಎನ್.ಓ.ಸಿ ಕೊಡದಿದ್ದರಿಂದ ಮತ್ತು ಹೆಚ್ಚುವರಿಯಾಗಿ ರೂ. 18831.80 ನ್ನು ಪಡೆದಿದ್ದರಿಂದ ಮಂಜುನಾಥ್ ರವರು ಬಜಾಜ್ ಫೈನಾನ್ಸ್ ಕಂಪೆನಿಯು ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಸೇವೆಯಲ್ಲಿ ನ್ಯೂನತೆ ಉಂಟು ಮಾಡಿದ್ದಾರೆ ಆರೋಪಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಹೆಚ್ಚುವರಿ ಹಣವನ್ನು ಮತ್ತು ಸೇವಾ ನ್ಯೂನತೆಗಾಗಿ ಪರಿಹಾರವನ್ನು ಕೋರಿದ್ದರು.

ಕರಣವನ್ನು ದಾಖಲು ಮಾಡಿಕೊಂಡ ಆಯೋಗವು, ಎದುರುದಾರರಾದ ಬಜಾಜ್ ಫೈನಾನ್ಸ್ ಕಂಪೆನಿಯ ಕುಶಾಲನಗರ ಶಾಖೆಯ ವ್ಯವಸ್ಥಾಪಕರಿಗೆ ಮತ್ತು ಪೂನಾದಲ್ಲಿರುವ ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕರಿಗೆ ನೋಟೀಸ್ ಜಾರಿಗೊಳಿಸಲಾಗಿತ್ತು. ಇವರ ಪೈಕಿ ಕುಶಾಲನಗರ ಕಚೇರಿಯ ವ್ಯವಸ್ಥಾಪಕರು ಮಾತ್ರ ವಕೀಲರ ಮೂಲಕ ತಕರಾರು ಸಲ್ಲಿಸಿ ಡಿ.ಎಂ. ಮಂಜುನಾಥರವರ ತಕರಾರನ್ನು ನಿರಾಕರಿಸಿದ್ದರು ಅಲ್ಲದೇ ಬ್ಯಾಂಕ್ ಆಫ್ ಬರೋಡ ಸುಂಟಿಕೊಪ್ಪ ಶಾಖೆಯನ್ನು ಪ್ರತಿವಾದಿಯನ್ನಾಗಿ ಮಾಡದಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರಲ್ಲದೇ ರೂ. 999 ರಂತೆ 12 ತಿಂಗಳು ವಿಮೆ ಹಣವನ್ನು ಪಡೆದುಕೊಳ್ಳಲಾಗಿದೆ. ಫಿರ್ಯಾದುದಾರರ ನಡುವೆ ಯಾವುದೇ ಗ್ರಾಹಕ ಅಥವಾ ಸೇವೆಯ ಸಂಬಂಧ ವ್ಯವಹಾರ ನಡೆದಿರುವುದಿಲ್ಲ ಎಂದು ಲಿಖಿತ ವಾದ ಮಂಡಿಸಿದ್ದರು.

 

ಇದಕ್ಕೆ ತನ್ನ ಪರವಾಗಿ ಸ್ವತಃ ಮೌಖಿಕವಾಗಿ ಮತ್ತು ಲಿಖಿತವಾಗಿ ವಾದ ಮಂಡಿಸಿದ ಮಂಜುನಾಥ್ ರವರು ಬಜಾಜ್ ಫೈನಾನ್ಸ್ ಕಂಪೆನಿಯು ಕೂಡ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂಬುವುದಕ್ಕೆ ಕರ್ನಾಟಕ ರಾಜ್ಯ ಆಯೋಗದಿಂದ ತೀರ್ಮಾನಗೊಂಡಿರುವ ಮೀನಾಕ್ಷಿ V/s ಬಜಾಜ್ ಫೈನಾನ್ಸ್ ಕಂಪೆನಿಯ ಪ್ರಕರಣವನ್ನು ಉಲ್ಲೇಖಿಸಿ ಅದರ ದಾಖಲೆ ನೀಡಿ ತಮ್ಮ ವಾದವನ್ನು ಪುಷ್ಟೀಕರಿಸಿದ್ದರು.

ಬ್ಯಾಂಕ್ ಆಫ್ ಬರೋಡ ಸುಂಟಿಕೊಪ್ಪ ಶಾಖೆಯು ನನ್ನ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿರುವುದಿಲ್ಲ. ಬದಲಾಗಿ ಬಜಾಜ್ ಫೈನಾನ್ಸ್ ಕಂಪೆನಿಯೇ ನೇರವಾಗಿ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿದೆ ಎಂದು ವಾದ ಮಂಡಿಸಿದ ಮಂಜುನಾಥ್ ರವರು ಬಜಾಜ್ ಫೈನಾನ್ಸ್ ಹೆಸರಿನಲ್ಲಿಯೇ ಎಲ್ಲಾ ಹಣ ವರ್ಗಾವಣೆಗೊಂಡಿರುವುದಕ್ಕೆ ಪೂರಕ ದಾಖಲೆಯಾಗಿ ಬ್ಯಾಂಕ್ ಸ್ಟೇಟ್ ಮೆಂಟ್ ನ್ನು
ಹಾಜರುಪಡಿಸಿದ್ದರಲ್ಲದೇ ಹೀಗಾಗಿ ಬ್ಯಾಂಕ್ ಆಫ್ ಬರೋಡವನ್ನು ಪ್ರತಿವಾದಿಯನ್ನಾಗಿಸುವ ಅಗತ್ಯತೆ ಇಲ್ಲ ಎಂದು ವಾದಿಸಿದ್ದರು.

ಬಜಾಜ್ ಫೈನಾನ್ಸ್ ಕಂಪೆನಿ ಕೂಡ ಗ್ರಾಹಕ ಕಾಯಿದೆಯ ವ್ಯಾಪ್ತಿಗೆ ಬರುತ್ತದೆ

ವಾದ – ಪ್ರತಿವಾದ ಆಲಿಸಿದ ಆಯೋಗದ ಅಧ್ಯಕ್ಷರಾದ ಸಿ. ರೇಣುಕಾಂಬ ಮತ್ತು ಸದಸ್ಯರಾದ ಗೌರಮ್ಮಣ್ಣಿರವರು, ವಾದಿ ಮಂಜುನಾಥ್ ರವರು ತನ್ನ ವಾದವನ್ನು ಪುಷ್ಟೀಕರಿಸಲು ಕರ್ನಾಟಕ ರಾಜ್ಯ ಆಯೋಗದಿಂದ ತೀರ್ಮಾನಗೊಂಡಿರುವ ಮೀನಾಕ್ಷಿ v/s ಬಜಾಜ್ ಫೈನಾನ್ಸ್ ಕಂಪೆನಿಯ ಪ್ರಕರಣವನ್ನು ಉಲ್ಲೇಖಿಸಿರುವುದನ್ನು ಗಣನೆಗೆ ತೆದುಕೊಂಡಿದ್ದು, ಬಜಾಜ್ ಫೈನಾನ್ಸ್ ಕಂಪೆನಿಯು ಸಾಲ ಸೌಲಭ್ಯವನ್ನು ನೀಡುವ ಮೂಲಕ ಸೇವೆಯನ್ನು ನೀಡಿರುವುದರಿಂದ ಗ್ರಾಹಕ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದಿದ್ದಾರೆ.

ವಾದಿ ಅಸಲು ಮತ್ತು ಬಡ್ಡಿ ಸೇರಿ ಮರು ಪಾವತಿ ಮಾಡಿರುತ್ತಾರೆ. ಆದರೆ ಇ-ಅಗ್ರಿಮೆಂಟ್ ಪ್ರಕಾರ ಹಣವನ್ನು ವಿಳಂಬವಾಗಿ ಪಾವತಿಸಿರುವ ಸಂದರ್ಭದಲ್ಲಿ ದಂಡ ವಿಧಿಸಲಾಗಿರುತ್ತದೆ ಎಂಬುವುದು ಪ್ರತಿವಾದಿಯ ವಾದವಾಗಿದೆ. ಆದರೆ ಸದರಿ ಇ-ಅಗ್ರಿಮೆಂಟ್ ದಾಖಲೆಯನ್ನು ವಾದಿಗೆ ಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ನೀಡಿರುವುದಿಲ್ಲ. ಗ್ರಾಹಕರಿಗೆ ಅರ್ಥವಾಗುವ ರೀತಿಯಲ್ಲಿ ಕಂಪೆನಿಯ ವ್ಯವಹಾರವನ್ನು ಬಹಿರಂಗ ಪಡಿಸದೇ ತದನಂತರದಲ್ಲಿ ದಾಖಲೆಯ ಪ್ರಕಾರ ಹಣ ಪಡೆಯಲಾಗಿದೆ ಎಂದು ವಾದಿಸಿರುವುದರಲ್ಲಿ ಯಾವುದೇ ತಿರುಳಿಲ್ಲ ಎಂದು ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿದೆ.

ಪ್ರತಿವಾದಿ ಬಜಾಜ್ ಫೈನಾನ್ಸ್ ಕಂಪನಿ ಅನೇಕ ಬಾರಿ ಒಂದೇ ದಿನಾಂಕದಂದು ದಂಡವನ್ನು ವಸೂಲಿ ಮಾಡಿರುವುದು ಕಂಡುಬಂದಿರುತ್ತದೆ ಹಾಗೂ ಪಡೆದ ಸಾಲದ ಮೊತ್ತವನ್ನು ಕ್ರಮವಾಗಿ ಕಂಪನಿಯ ಸ್ಟೇಟ್ ಮೆಂಟ್ ನಲ್ಲಿ ನಮೂದು ಮಾಡಿರುವುದಿಲ್ಲ. ವಿಮಾ ಕಂತುಗಳಿಗೆ ಹಣ ಕಟಾಯಿಸಿರುವ ಬಗ್ಗೆ ಯಾವುದೇ ಪೂರಕ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ ಎಂದು
ತೀರ್ಪಿನಲ್ಲಿ ತಿಳಿಸಲಾಗಿದೆ.

ಬಡ್ಡಿ ರಹಿತ ಸಾಲದ ಆಮಿಷ:
ಎಚ್ಚರ ವಹಿಸುವುದು ಅಗತ್ಯವೆಂದ ಆಯೋಗ

“ಇತ್ತೀಚಿನ ದಿನಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಯಾವುದೇ ಬಡ್ಡಿ ಇಲ್ಲದೆ ಬಡ್ಡಿ ರಹಿತ ಸಾಲ ಕೊಡುವುದಾಗಿ ಆಮಿಷವನ್ನು ಒಡ್ಡಿ ಗ್ರಾಹಕರನ್ನು ಆಕರ್ಷಿಸಿ ತದನಂತರದಲ್ಲಿ ಸಾಲ ತೀರುವಳಿಯಾದರೂ ಸಹ ಸಾಲ ತೀರಿರುವ ಬಗ್ಗೆ ಹಿಂಬರಹ ನೀಡಲು ಸತಾಯಿಸಿ ಸುಳ್ಳು ಖಾತೆಗಳನ್ನು ಸೃಷ್ಟಿಸಿ ಮತ್ತೆ ಮತ್ತೆ ಗ್ರಾಹಕರ ಖಾತೆಯಿಂದ ಹಣವನ್ನು ಲಪಟಾಯಿಸುತ್ತಿರುವುದು ವಿಷಾದನೀಯ ಸಂಗತಿ. ಅಂತಹ ಸಂದರ್ಭದಲ್ಲಿ ಗ್ರಾಹಕರು ಅತಿ ಹೆಚ್ಚು ಶೋಷಣೆಗೆ ಒಳಗಾಗಿ ತೊಂದರೆ ಅನುಭವಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಒಂದು ವೇಳೆ ಇಂತಹ ಪ್ರವೃತ್ತಿಯನ್ನು ತಡೆಗಟ್ಟದಿದ್ದಲ್ಲಿ ನಾಗರಿಕ ಸಮಾಜದ ಮೇಲೆ ತೀವ್ರ ರೀತಿಯ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳು ಅತಿ ಹೆಚ್ಚು ಇರುವುದರಿಂದ ಪ್ರಾರಂಭದಲ್ಲಿಯೇ ಗ್ರಾಹಕರು ಖಾಸಗಿ ಕಂಪೆನಿಗಳಲ್ಲಿ ಸಾಲ ಪಡೆಯುವ ಸಂದರ್ಭದಲ್ಲಿ ಕಂಪೆನಿಯ ವ್ಯವಹಾರದ ಬಗ್ಗೆ ಪರಿಶೀಲಿಸಿ ನಂತರ ಮುಂದಿನ ಹೆಜ್ಜೆ ಇಡುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಟ್ಟಿದೆ.”

ಪ್ರಸ್ತುತ ಈ ಪ್ರಕರಣದಲ್ಲಿ ಲಭ್ಯವಿರುವ ದಾಖಲಾತಿಗಳನ್ನು ಪರಿಶೀಲಿಸಿದಾಗ ವಾದಿ ಖಾತೆಯಿಂದ ವರ್ಗಾಯಿಸಿಕೊಂಡಿರುವ ಹಣಕ್ಕೂ ಪ್ರತಿವಾದಿ ನೀಡಿರುವ ಸ್ಟೇಟ್ ಮೆಂಟ್ ಮಾಹಿತಿಗೂ ಒಂದಕ್ಕೊಂದು ತಾಳೆಯಾಗುವುದಿಲ್ಲ. ವಾದಿ 2024ನೇ ಸಾಲಿನ ಜನವರಿ ಮೊದಲ ವಾರದಲ್ಲಿ ತಾವು ತೆಗೆದುಕೊಂಡ ಸಾಲವವನ್ನು ತೀರುವಳಿ ಮಾಡಿ ದಿನಾಂಕ 6-2-2024ರಂದು ಸಾಲ ಮುಕ್ತಾಯವಾಗಿರುವ ಬಗ್ಗೆ ಎನ್.ಓ.ಸಿ. ಕೊಡಬೇಕೆಂದು ಕೇಳಿದ್ದು, ಒಂದು ರೂ. ಬಾಕಿ ಇದೆ ಎಂದು ತಿಳಿಸಿದ್ದು, ಮೊತ್ತವನ್ನು ಪಾವತಿಸಿದ ನಂತರವೂ ಸಹ ಪ್ರತಿವಾದಿ ಸಾಲ ತೀರುವಳಿಯಾದ ಬಗ್ಗೆ ಪ್ರಮಾಣ ಪತ್ರವನ್ನು ಕೊಡದೇ ಸತಾಯಿಸಿ ದಿನಾಂಕ 8-3-2024 ರಂದು 590 ನ್ನು ಖಾತೆಯಿಂದ ಕಟಾಯಿಸಿರುತ್ತಾರೆ. ಆಯೋಗದಲ್ಲಿ ದೂರು ದಾಖಲಾದ ನಂತರ ಅಂದರೆ ದಿನಾಂಕ 10-6-2024 ರಂದು ಸಾಲ ಮುಕ್ತಾಯವಾಗಿದೆ ಎಂದು ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಪ್ರತೀ ತಿಂಗಳು 999/-ರಂತೆ ಒಟ್ಟು 12 ತಿಂಗಳು ವಿಮಾ ಮೊತ್ತವೆಂದು ವಾದಿಯಿಂದ ತಮ್ಮ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿರುತ್ತಾರೆ. ಆದರೆ ಪ್ರತಿವಾದಿ ನೀಡಿರುವ ಸ್ಟೇಟ್ ಮೆಂಟ್ ವಹಿಯಲ್ಲಿ ವಿಮಾ ಕಂತುಗಳ ಬಗ್ಗೆ ಯಾವುದೇ ವಿವರಣೆ ಇರುವುದಿಲ್ಲ. ಸ್ಟೇಟ್ ಮೆಂಟ್ ವಹಿಯಲ್ಲಿ ವಿಮೆಯ ಕಂತುಗಳ ಬಗ್ಗೆ ಯಾವುದೇ ವಿವರಣೆ ಇಲ್ಲದೆ ಖಾಲಿ ತೋರಿಸಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಎದುರುದಾರ ಸೇವಾ ನ್ಯೂನತೆ ಎಸಗಿರುವುದು ಮೇಲ್ನೋಟಕ್ಕೆ ಆಯೋಗಕ್ಕೆ ಗೋಚರವಾಗಿರುತ್ತದೆ. ವಾದಿಯು ಪ್ರತಿವಾದಿಯ ಸೇವಾ ನ್ಯೂನತೆಗಳನ್ನು ಪೂರಕ ದಾಖಲಾತಿಗಳನ್ನು ಹಾಜರುಪಡಿಸುವ ಮುಖೇನ ಸಾಬೀತುಪಡಿಸುವಲ್ಲಿ ಸಫಲರಾಗಿರುವುದರಿಂದ ಪ್ರತಿವಾದಿಯಿಂದ ಉಂಟಾದ ಸೇವಾ ನ್ಯೂನತೆಗೆ ರೂ. 5 ಸಾವಿರ, ಪ್ರಕರಣದ ಖರ್ಚು
5 ಸಾವಿರ ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ ವಾದಿ ತಂದಿರುವ ಫಿರ್ಯಾದನ್ನು ಪುರಸ್ಕರಿಸಲಾಗಿದೆ ಎಂದು ಆಯೋಗ ಉಲ್ಲೇಖಿಸಿದೆ.

ಎದುರುದಾರ ಬಜಾಜ್ ಫೈನಾನ್ಸ್ ಕಂಪೆನಿಯು ವಾದಿಯಿಂದ ಹೆಚ್ಚುವರಿಯಾಗಿ ಪಡೆದಿರುವ ರೂ. 18831 ನ್ನು ದಿನಾಂಕ 13-03-2024 ರಿಂದ ಸಾಲಿಯಾನ ಶೇ. 6 ರಷ್ಟು ಬಡ್ಡಿಯನ್ನು ಸೇರಿಸಿ ಈ ಆದೇಶದ 30 ದಿನಗಳ ಒಳಗಾಗಿ ಪಾವತಿಸುವುದು. ತಪ್ಪಿದಲ್ಲಿ ಮೇಲಿನ ಮೊತ್ತಕ್ಕೆ ಸಾಲಿಯಾನ ಶೇ. 12 ಬಡ್ಡಿಯನ್ನು ಸೇರಿಸಿ ಪಾವತಿಸುವುದು.
ವಾದಿಗೆ ಪ್ರತಿವಾದಿ ಉಂಟು ಮಾಡಿರುವ ಸೇವಾ ನ್ಯೂನತೆಗೆ ಪರಿಹಾರವಾಗಿ ರೂ. 5 ಸಾವಿರ ಮತ್ತು ಪ್ರಕರಣದ ಖರ್ಚು ವೆಚ್ಚಗಳಿಗೆ ರೂ. 5 ಸಾವಿರಗಳನ್ನು ಪಾವತಿಸತಕ್ಕದ್ದು.
ಈ ಆದೇಶವನ್ನು 30 ದಿನಗಳ ಒಳಗಾಗಿ ಪಾವತಿಸದಿದ್ದಲ್ಲಿ ಆದೇಶ ಉಲ್ಲಂಘನೆಗಾಗಿ ಪ್ರತಿವಾದಿ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 71 ಮತ್ತು72ರ ಅನ್ವಯ ಶಿಕ್ಷಾರ್ಹವಾದ ಜೈಲು ಶಿಕ್ಷೆ ಹಾಗೂ ದ್ರವ್ಯ ದಂಡನೆ ಶಿಕ್ಷೆಗಾಗಿ ಗುರಿಪಡಿಸಲು ಕ್ರಿಮಿನಲ್ ಪ್ರಕರಣವನ್ನು ಸಹ ಹೂಡಲು ಅರ್ಹರಾಗಿರುತ್ತಾರೆ ಎಂದು ಅಯೋಗವು ತೀರ್ಪಿನಲ್ಲಿ ಆದೇಶಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement