Published
3 months agoon
By
Akkare Newsವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ ಕಳೆದ ಬೇಸಗೆಯಲ್ಲಿ ಐತಿಹಾಸಿಕ ದಾಖಲೆಯ ಧಾರಣೆಯಿಂದ ಉತ್ತಮ ಆದಾಯ ಪಡೆದಿದ್ದ ಕೊಕ್ಕೋ ಬೆಳೆಗಾರರು ಈ ಬಾರಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಬಾರಿಯ ವಿಪರೀತ ಮಳೆಗೆ ಕೊಕ್ಕೋ ಕಾಯಿಗಳು ಕರಟು ತ್ತಿರುವುದರಿಂದ ಭಾರೀ ನಷ್ಟವಾಗುತ್ತಿರುವುದೇ ಕಾರಣ.
ಈ ಹಿಂದೆಯೇ ಕೊಕ್ಕೋ ಕೃಷಿ ಯಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಕೊಕ್ಕೋಗೆ ವಿವಿಧ ರೀತಿಯ ರೋಗಗಳು ಬಾಧಿ ಸುತ್ತಲೇ ಇದ್ದವು.
ಈ ನಡುವೆ ಸರಿಯಾದ ಧಾರಣೆಯೂ ಇಲ್ಲದೆ ಕರಾವಳಿ ಜಿಲ್ಲೆಗಳಲ್ಲಿ ಕೊಕ್ಕೋ ಬೆಳೆ ಕೆಲವು ವರ್ಷಗಳಿಂದ ಹಿಂಜರಿತ ಕಂಡಿತ್ತು. ಆದರೆ ಕಳೆದ ಬೇಸಗೆಯಲ್ಲಿ ಕೊಕ್ಕೋಗೆ ಐತಿಹಾಸಿಕ ದಾಖಲೆಯ ಧಾರಣೆ ಸಿಕ್ಕಿದ್ದರಿಂದ ಬೆಳೆಗಾರರಲ್ಲಿ ಹೊಸ ಹುರುಪು ಮೂಡಿತ್ತು. ಮೊದಲ ಬಾರಿಗೆ ಹಸಿ ಕೊಕ್ಕೋ ಕೆ.ಜಿ.ಗೆ 100 ರೂಪಾಯಿ ದಾಟಿ ಧಾರಣೆ 320ರ ವರೆಗೂ ಏರಿಕೆ ಕಂಡಿತ್ತು. ಆದರೆ ಆ ಬಳಿಕ ಇಳಿಕೆಯಾಗಿ ಮತ್ತೆ 100 ರೂ.ಗಳ ಆಸುಪಾಸಿನಲ್ಲಿ ಇದೆ.
ಕರಟಿದ ಕೊಕ್ಕೋ ಕಾಯಿಗಳು
ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಕೊಕ್ಕೋ ಬೆಳೆಗಾರರಿಗೆ ಕಂಟಕವಾಗಿದೆ. ಸಾಮಾನ್ಯವಾಗಿ ಉತ್ತಮ ಕೊಕ್ಕೊ ಫಸಲು ಲಭಿಸುತ್ತಿದ್ದ ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಈ ಬಾರಿ ಫಸಲೇ ಸಿಗದ ಸ್ಥಿತಿ ಬಂದಿದೆ. ಕೃಷಿಕರಿಗೆ ದಿನ ನಿತ್ಯ ಆದಾಯ ಕೊಡುವ ಮುಖ್ಯ ಮಿಶ್ರ ಬೆಳೆ ಕೊಕ್ಕೋಗೆ ವಿಪರೀತ ಮಳೆಯೇ ಹಿನ್ನಡೆ ತಂದಿದೆ.
ವಿಪರೀತ ಮಳೆಯಿಂದ ಕೊಕ್ಕೋ ಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗಿ ಕರಟುತ್ತಿವೆ ಹಾಗೂ ಕೊಳೆತು ಉದುರುತ್ತಿವೆ. ಹೂವಾಗಿ ಕಾಯಿ ಕಟ್ಟುತ್ತಿರುವಾಗಲೇ ಕರಟುತ್ತಿದ್ದು, ಬೆಳೆಯನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಹುತೇಕ ಗಿಡಗಳಲ್ಲಿ ಕರಟಿದ ಕಾಯಿಗಳೇ ಕಂಡುಬರುತ್ತಿದ್ದು, ಶೇ. 60ಕ್ಕೂ ಅಧಿಕ ಪ್ರಮಾಣದಲ್ಲಿ ಕೊಕ್ಕೋ ಕರಟಿದ ಸ್ಥಿತಿಯಲ್ಲಿದೆ ಎನ್ನುತ್ತಾರೆ ಬೆಳೆಗಾರರು. ಪ್ರತೀ ಮಳೆಗಾಲದಲ್ಲೂ ಈ ರೀತಿಯಲ್ಲಿ ಕಾಯಿ ಕರಟುತ್ತಿದ್ದರೂ ಈ ಬಾರಿ ವ್ಯಾಪಕವಾಗಿದೆ ಎನ್ನುವುದು ಬೆಳೆಗಾರರ ಅಭಿಪ್ರಾಯ. ಇದು ಕಪ್ಪು ಕಾಯಿ ಕೊಳೆರೋಗದ ಲಕ್ಷಣದಂತಿದೆ. ಕೊಕ್ಕೋದಲ್ಲಿ ಕಪ್ಪುಕಾಯಿ ಕೊಳೆರೋಗ ಫೈಟೋಫ¤ರಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ.
ಲಕ್ಷಣಗಳು: ಕಾಯಿಯ ಮೇಲೆ ಕಂದು ಬಣ್ಣದ ಅಥವಾ ಚಾಕಲೇಟ್ ಬಣ್ಣದ ಚುಕ್ಕಿ ಕಾಣಿಸಿಕೊಳ್ಳುತ್ತದೆ. ಕಾಲಕ್ರಮೇಣ ಅದು ಇಡೀ ಕಾಯಿಯನ್ನು ಆವರಿಸುತ್ತದೆ. ಕಾಯಿಯ ಹೊರ ಮೈಮೇಲೆ ಬಿಳಿ ಬಣ್ಣದ ದಾರದ ರೂಪದಲ್ಲಿ ಈ ಶೀಲಿಂಧ್ರವು ಬೆಳೆದಿರುತ್ತದೆ. ಕಾಯಿಯ ಒಳಭಾಗದಲ್ಲಿರುವ ಬೀಜವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಹತೋಟಿ ಕ್ರಮಗಳು: ಬಿದ್ದಿರುವಂ ಎಲೆಗಳು ಹಾಗೂ ರೋಗ ಪೀಡಿತ ಕಾಯಿಗಳನ್ನು ಹೆಕ್ಕಿ ಸುಟ್ಟು ಹಾಕಬೇಕು. ಸಮಯಕ್ಕೆ ಸರಿಯಾಗಿ ಗಿಡಗಳನ್ನು ಸವರುತ್ತಿರಬೇಕು. ಗಿಡ ಸವರುವುದರಿಂದ ಸೂರ್ಯನ ಬೆಳಕು ಮತ್ತು ಗಾಳಿಯಾಡಲು ಸಹಾಯಕವಾಗುತ್ತದೆ. ಮಲೆಗಾಲದಲ್ಲಿ ಶೇ. 1 ಬೋರ್ಡೋ ಮಿಶ್ರಣವನ್ನು ಸಿಂಪಡಿಸಬೇಕಾಗುತ್ತದೆ.
ಧಾರಣೆಯೂ ಕುಸಿತ: ಕಳೆದ ಬೇಸಗೆಯಲ್ಲಿ ಕೊಕ್ಕೋ ಧಾರಣೆಯಲ್ಲಿ ಏರಿಕೆ ಕಂಡು ಮೇ ತಿಂಗಳಿನ ವೇಳೆ 320 ರೂ.ವರೆಗೆ ಏರಿಕೆ ಕಂಡಿದ್ದ ಕೊಕ್ಕೋ ಧಾರಣೆ ಬೆಳೆಗಾರರಿಗೆ ಉತ್ತಮ ಆದಾಯ ನೀಡಿತ್ತು. ಪ್ರಸ್ತುತ 100 ರೂ. ಆಸುಪಾಸಿನಲ್ಲಿ ಇದ್ದರೂ ಇದೇ ಧಾರಣೆ ಸ್ಥಿರವಾಗಿದ್ದರೆ ಬೆಳೆಗಾರರಿಗೆ ಅನುಕೂಲಕರ. ಈಗ ಮಳೆಗಾಲದಲ್ಲಿ ಕೊಕ್ಕೋ ಗುಣಮಟ್ಟದಿಂದಾಗಿ ಬೆಲೆ ಇಳಿಕೆ ಮಾಡಲಾಗುತ್ತಿದ್ದು, ಇದರ ಜತೆಗೆ ರೋಗಬಾಧೆಯೂ ಎದುರಾಗಿದೆ.
ಮಳೆಗಾಲದಲ್ಲಿ ಕೊಕ್ಕೋ ಬೆಳೆಯಲ್ಲಿ ಕೊಳೆ ರೋಗ, ಕಪ್ಪು ಕಾಯಿ ರೋಗ ಕಾಣಿಸಿಕೊಳ್ಳುತ್ತದೆ. ವಿಪರೀತ ಮಳೆಗೆ ಹಾಗೂ ಶಿಲೀಂಧ್ರಗಳಿಂದ ಕೊಕ್ಕೋ ಕಾಯಿಗಳು ಕಪ್ಪಾಗಿ ಕರಟುತ್ತವೆ. ಇದರ ನಿಯಂತ್ರಣ ಸಾಧ್ಯವಿದ್ದು, ಕೊಕ್ಕೋ ಹೂವು ಬಿಟ್ಟು ಕಾಯಿ ಇರುವ ಸಂದರ್ಭದಲ್ಲೇ ಬೋರ್ಡೋ ದ್ರಾವಣ ಅಥವಾ ತಜ್ಞರಿಂದ ಪರಿಶೀಲಿಸಿ ಸಂಬಂಧಿಸಿದ ಔಷಧ ಸಿಂಪಡಿಸಬೇಕು.