ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಪುತ್ತೂರು :ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

Published

on

ಪುತ್ತೂರು :ದ.ಕ. ಜಿಲ್ಲೆಯ ಎರಡನೆ ಅತಿ ದೊಡ್ಡ ವಾಣಿಜ್ಯ ಪಟ್ಟಣ ಎಂದೆನಿಸಿರುವ ಪುತ್ತೂರು ನಗರ ಶರವೇಗದಲ್ಲಿ ಅಭಿವೃದ್ದಿಗೊಳ್ಳುತ್ತಿರುವ ಪ್ರದೇಶ. ದಿನ ನಿತ್ಯವೂ ಇಲ್ಲಿ ವಾಹನ ದಟ್ಟಣೆಯದ್ದೇ ಕಿರಿಕಿರಿ. ಕಳೆದ ಕೆಲವು ವರ್ಷಗಳಿಂದ ಪಟ್ಟಣದೊಳಗೆ ನುಗ್ಗುತ್ತಿರುವ ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ ಅನ್ನುವುದನ್ನು ಅಂಕಿ ಅಂಶಗಳು ದೃಢಪಡಿಸಿವೆ.
ಸರ್ಕಲ್‌ಗ‌ಳಲ್ಲಿ ಸಂಚಾರ ದಟ್ಟಣೆ ಸುಗಮಕ್ಕೆ, ವಾಹನಗಳು ಕ್ರಮಬದ್ಧವಾಗಿ ಸಂಚರಿಸಲು ಇರುವ ವ್ಯವಸ್ಥೆಗಳು ಆಧುನಿಕರಣ ಗೊಂಡಿವೆಯೇ ಎಂದು ಕಣ್ಣಾಡಿಸಿದರೆ, ಇಲ್ಲ ಅನ್ನುತ್ತಿದೆ ವಸ್ತುಸ್ಥಿತಿ.

ಬಹುತೇಕ ನಗರಗಳನ್ನು ಕಾಡುವ ಸಮಸ್ಯೆಗಳಲ್ಲಿ ವಾಹನ ದಟ್ಟಣೆಯು ಒಂದು. ಕಳೆದ ಹತ್ತು ವರ್ಷಗಳಿಂದ ಈಚೆಗೆ ಪುತ್ತೂರು ನಗರವೂ ಅದರಿಂದ ಹೊರತಾಗಿಲ್ಲ. ವಿಸ್ತರಣೆಯಾಗದ ರಸ್ತೆಗಳು ಒಂದೆಡೆಯಾದರೆ, ಪಾರ್ಕಿಂಗ್‌ಗೆ ಸ್ಥಳಾವಕಾಶ ಇಲ್ಲದಿರುವುದು ಇನ್ನೊಂದೆಡೆ. ಈ ಮಧ್ಯೆ ವ್ಯವಸ್ಥೆಗಳ ಸುಗಮಕ್ಕೆ ಆಧುನಿಕ ಸ್ಪರ್ಶ ನೀಡದಿರುವುದು ಮತ್ತೂಂದೆಡೆ. ಪುತ್ತೂರು ನಗರದ ಸರ್ಕಲ್‌ಗ‌ಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗ‌ಳೇ ಇಲ್ಲ. ಇಲ್ಲಿ ಪ್ರತಿ ವಾಹನಕ್ಕೂ ಸಂಚಾರ ಪೊಲೀಸರೇ ನಿಲ್ಲಿಸಿ, ಹೋಗಿ ಎನ್ನುವ ಸಿಗ್ನಲ್‌ ನೀಡಬೇಕು. ಈಗಿನ ವ್ಯವಸ್ಥೆಯನ್ನು ನಂಬಿ ಕುಳಿತರೆ ಭವಿಷ್ಯದ ಪುತ್ತೂರು ನಗರದೊಳಗೂ ಗಂಟೆಗಟ್ಟಲೆ ಕಾಯ ಬೇಕಾದ ಸ್ಥಿತಿ ಬರಬಹುದು. ಈ ಉದ್ದೇಶದಿಂದ ಉದಯವಾಣಿ ಸುದಿನ ಇಲ್ಲೆಲ್ಲಾ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆಗಳು ಇರಲಿ ಎನ್ನುವುದನ್ನು ಆಡಳಿತ ವ್ಯವಸ್ಥೆಯ ಮುಂದಿಡುತ್ತಿದೆ.

 

ತಾಲೂಕಿನಲ್ಲಿರುವ ವಾಹನಗಳ ಸಂಖ್ಯೆ
-ದ್ವಿಚಕ್ರ -71,160
-ಕಾರು-24,939
-ಬಸ್‌- 480
-ಭಾರೀ ಸರಕು ವಾಹನ -837
-ಮಧ್ಯಮ ಸರಕು ವಾಹನ-324
-ಸಣ್ಣ ಸರಕು ವಾಹನ-2,480
-3 ಚಕ್ರದ ವಾಹನ (ಗೂಡ್ಸ್‌)-600
-3 ಚಕ್ರದ ವಾಹನ (ಪ್ರಯಾಣಿಕ)-5230
-ಇತರ ವಾಹನ- 39
-ಒಟ್ಟು ವಾಹನಗಳ ಸಂಖ್ಯೆ- 1,10,545

ನಗರದ ಕೇಂದ್ರ ವೃತ್ತ-ಗಾಂಧಿ ಕಟ್ಟೆ ಹತ್ತಿರ ಪರಿಸ್ಥಿತಿ ಹೇಗಿದೆ?
ಎಲ್ಲ ದಿಕ್ಕಿನಿಂದ ಬರುವ ವಾಹನಗಳು ಸಂಧಿಸುವ ಕೇಂದ್ರ ಸ್ಥಾನ ಇದು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಇಲ್ಲಿಂದಲೇ ನಿಲ್ದಾಣದಿಂದ ನಿರ್ಗಮಿಸುತ್ತವೆ. ಚೌಕಿಗೆ ತಾಗಿಕೊಂಡೇ ವಿದ್ಯಾಸಂಸ್ಥೆ ಇದ್ದು ಸಂಜೆ-ಬೆಳಗ್ಗೆ ಸಾವಿರಾರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಅಟೋಗಳು ಇಲ್ಲಿ ನುಗ್ಗುತ್ತದೆ. ಆ ವೇಳೆ ಟ್ರಾಫಿಕ್‌ ವ್ಯವಸ್ಥೆ ಗೊಂದಲದ ಗೂಡಾಗಿರುತ್ತದೆ.

ಅರುಣ ಸಭಾಭವನ -ಹಿಂದಿನ ಥಿಯೇಟರ್‌ ಬಳಿ ಪರಿಸ್ಥಿತಿ ಹೇಗಿದೆ?
ಇದು ನಗರದೊಳಗಿನ ಅತಿ ಹೆಚ್ಚು ವಾಹನ ದ‌ಟ್ಟಣೆ ಪ್ರದೇಶ. ಸುಳ್ಯ, ಈಶ್ವರಮಂಗಲ, ಪಾಣಾಜೆ, ಕಾಣಿಯೂರು ಭಾಗದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ 3 ದಿಕ್ಕಿನಿಂದ ವಾಹನಗಳು ಬರುತ್ತವೆ. ಎಪಿಎಂಸಿ ಸಂಪರ್ಕ ರಸ್ತೆಯೂ ಇಲ್ಲಿದೆ. ಇಲ್ಲೇ ಸಂಚಾರ ಪೊಲೀಸರು ವಾಹನಗಳನ್ನು ನಿಲ್ಲಿಸಿ ದಂಡ ಹಾಕುತ್ತಾರೆ. ಹೀಗಾಗಿ ಟ್ರಾಫಿಕ್‌ ಜಾಮ್‌ ಹೆಚ್ಚುತ್ತಿದೆ.

 

ಟ್ರಾಫಿಕ್‌ ಸಿಗ್ನಲ್‌ ಏಕೆ?
ಇಲ್ಲಿ ಪೊಲೀಸ್‌ ಚೌಕಿ ಇದೆ. ಒಬ್ಬರು/ಇಬ್ಬರು ಸಂಚಾರ ಪೊಲೀಸರು ಇರುತ್ತಾರೆ. ಪಡೀಲು-ಬೆದ್ರಾಳ ರಸ್ತೆ ಎರಡನೆ ಬೈಪಾಸ್‌ ಆಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದ್ದು ಆಗ ಎಪಿಎಂಸಿ ರಸ್ತೆ ಮೂಲಕ ಆ ರಸ್ತೆಗಳಿಗೆ ಸಂಚರಿಸುವ ವಾಹನಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಕಾಣಬಹುದು. ಮೊದಲೇ ಇಲ್ಲಿ ದಟ್ಟಣೆ, ಆ ಪ್ರಮಾಣ ದುಪ್ಪಟ್ಟಾಗಬಹುದು.

 

ಟ್ರಾಫಿಕ್‌ ಸಿಗ್ನಲ್‌ ಏಕೆ?
ಇಲ್ಲಿ ಈಗಿನ ವ್ಯವಸ್ಥೆಯಿಂದ ಶೇ.10ರಷ್ಟು ವಾಹನ ದಟ್ಟಣೆ ನಿಯಂತ್ರಣಕ್ಕೆ ಪರಿಹಾರ ಕಾಣುತ್ತಿಲ್ಲ. ಹೀಗಾಗಿ ಸಂಚಾರ ಪೊಲೀಸ್‌ ಹೆಚ್ಚಳದ ಜತೆಗೆ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆಯಾಗಬೇಕು.ಇಲ್ಲಿ ವಾಹನಗಳ, ಜನರ ಓಡಾಟ ಅತಿ ಹೆಚ್ಚಾಗಲಿದೆ.

ದರ್ಬೆ ಪರಿಸ್ಥಿತಿ ಹೇಗಿದೆ?
ಇದು ಸುಳ್ಯ ಭಾಗದಿಂದ ಬೈಪಾಸ್‌ ಮೂಲಕ ನಗರ ಪ್ರವೇಶಿಸುವ ಮೊದಲ ವೃತ್ತ. ಇಲ್ಲಿಗೆ ಐದಾರು ದಿಕ್ಕಿನಿಂದ ವಾಹನಗಳು ಪ್ರವೇಶಿಸುತ್ತಿವೆ. ಇಲ್ಲಿ ಒಬ್ಬ ಸಿಬಂದಿ ಇರುತ್ತಾರೆ. ಮೂರು ಕಡೆಯಿಂದ ನುಗ್ಗುವ ವಾಹನ ನಿಯಂತ್ರಣ ಕಷ್ಟವಾಗುತ್ತಿದೆ.

ಉದಾಹರಣೆಗೆ: ಬೈಪಾಸಿನಿಂದ ಕಾಣಿಯೂರು ಕಡೆಗೆ ಹೋಗುವವರು ದರ್ಬೆ ಸರ್ಕಲ್‌ ಸುತ್ತು ಹಾಕಬೇಕು, ಅದೇ ರೀತಿ ಕಾಣಿಯೂರು ಭಾಗದಿಂದ ನಗರಕ್ಕೆ ಬರುವವರು ಸರ್ಕಲ್‌ ಸುತ್ತು ಹಾಕಬೇಕು. ಎಡ-ಬಲ ಹೀಗೆ ವಿವಿಧ ದಿಕ್ಕಿನಲ್ಲಿ ರಸ್ತೆ ಸಂಪರ್ಕ ಇದ್ದು ಏಕಕಾಲದಲ್ಲಿ ಇಲ್ಲಿ ವಾಹನಗಳು ಪ್ರವೇಶಿಸಿದಾಗ ಟ್ರಾಫಿಕ್‌ ದಟ್ಟಣೆ ಉಂಟಾಗುತ್ತದೆ.

 

ಟ್ರಾಫಿಕ್‌ ಸಿಗ್ನಲ್‌ ಏಕೆ?
ಅಂತಾರಾಜ್ಯ ಸಂಪರ್ಕ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಪಡೆಯುವ ಈ ವೃತ್ತ ಭವಿಷ್ಯತ್ತಿನಲ್ಲಿ ಇನ್ನಷ್ಟು ವಾಹನ ನಿಬಿಡ ಪ್ರದೇಶವಾಗುವ ಸಾಧ್ಯತೆ ಇದೆ. ಇಲ್ಲಿ ನಾಲ್ಕೈದು ದಿಕ್ಕಿನಿಂದ ವಾಹನಗಳು ಬರುವ ಕಾರಣ ಟ್ರಾಫಿಕ್‌ ಸಿಗ್ನಲ್‌ನ ಆವಶ್ಯಕತೆ ಇದೆ. ತತ್‌ಕ್ಷಣಕ್ಕೆ ಇಲ್ಲಿ ಕನಿಷ್ಠ ಎರಡು ಸಿಬಂದಿಗಳನ್ನು ನಿತ್ಯವೂ ಬಳಸಿಕೊಳ್ಳಬೇಕು.

ಸಂಚಾರ ಠಾಣೆ ಪಕ್ಕ ಹೇಗಿದೆ?
ನಗರ, ಸಂಚಾರ, ಮಹಿಳಾ ಠಾಣೆಯು ಕೂಗಳತೆ ದೂರ ದಲ್ಲಿರುವ, ಶ್ರೀಧರ್‌ ಭಟ್‌ ಅಂಗಡಿ ಬಳಿ ಇರುವ ರಸ್ತೆ ಬದಿಯ ಸ್ಥಳವಿದು. ಇಲ್ಲಿ ಸಂಚಾರ ಪೊಲೀಸರಿದ್ದಾರೆ. ಸರಕಾರಿ ಕಚೇರಿ, ನ್ಯಾಯಾಲಯ, ಆಸ್ಪತ್ರೆ, ವಾರದ ಸಂತೆ ನಡೆಯುವ ಸ್ಥಳಕ್ಕೆ ತೆರಳುವ ರಸ್ತೆ. ಶ್ರೀಧರ್‌ ಭಟ್‌ ಅಂಗಡಿ ಮುಂಭಾಗದಿಂದ ಕವಲೊಡೆದು ಕಲ್ಲಿಮಾರು ಮೂಲಕ ಪರ್ಲಡ್ಕದಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಧಿಸುವ ರಸ್ತೆ ಇದಾಗಿದೆ. ನಗರದ ಹೊರವಲಯದಿಂದ ಬೊಳುವಾರು ಮೂಲಕ ಬರುವ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಮಂಗಳೂರು, ಉಪ್ಪಿನಂಗಡಿ, ವಿಟ್ಲ ಭಾಗಕ್ಕೆ ತೆರಳುವ ಎಲ್ಲ ವಾಹನಗಳು ಇಲ್ಲಿಂದಲೇ ಪ್ರವೇಶಿಸುತ್ತವೆ.

 

ಟ್ರಾಫಿಕ್‌ ಸಿಗ್ನಲ್‌ ಏಕೆ?
ಇದು ಜನದಟ್ಟಣೆ, ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆ. ಜಿಲ್ಲಾ ಕೇಂದ್ರವಾದರೆ ಸರಕಾರಿ ಕಚೇರಿಗಳು ಮೇಲ್ದರ್ಜೆಗೆ ಏರಲಿದೆ. ಆಗ ಕಚೇರಿಗಳಿಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಭವಿಷ್ಯದ ಹಿತದೃಷ್ಟಿಯಿಂದ, ಪೊಲೀಸ್‌ ಠಾಣೆ ಪಕ್ಕದಲ್ಲೇ ಇರುವ ಕಾರಣ ಈ ಸ್ಥಳದಲ್ಲಿ ಟ್ರಾಫಿಕ್‌ ಸಿಗ್ನಲ್‌ ಬೇಕಾಗಿದೆ.

ಬೊಳುವಾರು ಜಂಕ್ಷನ್‌ ಹೇಗಿದೆ?
ಪುತ್ತೂರು ನಗರವನ್ನು ಪ್ರವೇಶಿಸುವ ಹೆಬ್ಟಾಗಿಲು ಇದು. ನಗರದಿಂದ ಹೊರ ವಲಯಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳ ಬೊಳುವಾರು ವೃತ್ತ. ಇಲ್ಲಿ ಪೊಲೀಸರು ಅಪರೂಪ. ಜನರೇ ದಟ್ಟಣೆ ನಿವಾರಿಸಿಕೊಳ್ಳಬೇಕು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಉಪ್ಪಿನಂಗಡಿ ಭಾಗಕ್ಕೆ ಐದು ನಿಮಿಷಕ್ಕೊಮ್ಮೆ ಬಸ್‌ ಸಂಚಾರ ಇದೆ. ಅವು ಬೊಳುವಾರು ವೃತ್ತದಲ್ಲಿ ತಿರುವು ಪಡೆದುಕೊಂಡೇ ಮುಂದಕ್ಕೆ ಹೋಗಬೇಕು. ಮೂರು ರಸ್ತೆಗಳಿಂದ ಬಸ್‌ಗಳು, ಇತರ ವಾಹನಗಳು ಏಕಕಾಲದಲ್ಲಿ ಸಂಗಮವಾದರೆ ಟ್ರಾಫಿಕ್‌ ಸಮಸ್ಯೆ ಉಲ್ಬಣಿಸುತ್ತದೆ.

ಟ್ರಾಫಿಕ್‌ ಸಿಗ್ನಲ್‌ ಏಕೆ?
ಬೊಳುವಾರಿನಿಂದ ಹಾರಾಡಿ ತನಕ ಚತುಷ್ಪಥ ರಸ್ತೆ ನಿರ್ಮಾಣ ಹಂತದಲ್ಲಿದೆ. ಭವಿಷ್ಯದಲ್ಲಿ ಇದು 2ನೇ ಬೈಪಾಸ್‌ ರಸ್ತೆಗೆ ಲಿಂಕ್‌ ರಸ್ತೆಯಾಗಬಹುದು. ಅತಿ ಹೆಚ್ಚು ವಾಹನ ಓಡಾಟದ ರಸ್ತೆಯಾಗುವ ಸಾಧ್ಯತೆ ಇದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement